-->
‘ಕ್ಷೇತ್ರಪಾಲ’ ಕಥೆ ಅನುಮತಿಯಿಲ್ಲದೆ ಸಿನಿಮಾ ಮಾಡಲು ಯತ್ನ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ರಾಘವೇಂದ್ರ ಕುಲಾಲ್

‘ಕ್ಷೇತ್ರಪಾಲ’ ಕಥೆ ಅನುಮತಿಯಿಲ್ಲದೆ ಸಿನಿಮಾ ಮಾಡಲು ಯತ್ನ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ರಾಘವೇಂದ್ರ ಕುಲಾಲ್


ಕರಾವಳಿಯ ಆಚಾರ-ವಿಚಾರಗಳನ್ನು ಒಳಗೊಂಡ ‘ಕ್ಷೇತ್ರಪಾಲ’ ಕಥೆಯನ್ನು ತಮ್ಮ ಅನುಮತಿಯಿಲ್ಲದೆ ಮುತ್ತಮ್ಮ ಬ್ಯಾನರ್‌ನಡಿ ಸಿನಿಮಾ ಮಾಡಲಾಗುತ್ತಿದೆ ಎಂದು ಕಥೆಗಾರ ರಾಘವೇಂದ್ರ ಕುಲಾಲ್ ಆರೋಪಿಸಿದ್ದಾರೆ. ಈ ಕುರಿತು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ‘ಕ್ಷೇತ್ರಪಾಲ’ ಕಥೆಯನ್ನು ಸಿದ್ಧಪಡಿಸಿದ್ದು, ಅದನ್ನು ಸಿನಿಮಾ ಮಾಡುವ ಉದ್ದೇಶದಿಂದ ಮುತ್ತಮ್ಮ ಪ್ರೊಡಕ್ಷನ್ಸ್‌ನ ರಾಘವ್ ಪೂಜಾರಿ ಅವರೊಂದಿಗೆ ಹಂಚಿಕೊಂಡಿದ್ದೆ. ಆದರೆ ಇದೀಗ ತಮ್ಮ ಅನುಪಸ್ಥಿತಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಕಥೆಯನ್ನು ತಾನು ಮತ್ತು ಪತ್ನಿ ರಾಜೀವಿ ಸೇರಿ ಮೂರು ವರ್ಷಗಳ ಕಾಲ ಪರಿಶ್ರಮಪಟ್ಟು ರಚಿಸಿದ್ದೇವೆ. ಕಥೆಗಾಗಿ ಸಾಕಷ್ಟು ಶ್ರಮ ವಹಿಸಿದ್ದು, ಅದರ ಫಲ ತಮಗೆ ದೊರೆಯಬೇಕು ಎಂಬುದು ತಮ್ಮ ಆಶಯವಾಗಿದೆ. ಆದರೆ ತಮ್ಮ ಅನುಮತಿಯಿಲ್ಲದೆ ಕಥೆಯನ್ನು ಬಳಸಿಕೊಂಡು ಸಿನಿಮಾ ಮಾಡಲು ಮುಂದಾಗಿರುವುದು ತೀವ್ರ ಬೇಸರ ತಂದಿದೆ ಎಂದು ಹೇಳಿದರು.

ತಮಗೆ ಲಭ್ಯವಾದ ಮಾಹಿತಿಯ ಪ್ರಕಾರ, ಈಗಾಗಲೇ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಕುರಿತು ತಮ್ಮ ವಕೀಲರ ಮೂಲಕ ಮೂರು ಬಾರಿ ಕಾನೂನು ನೋಟಿಸ್ ನೀಡಿದ್ದರೂ, ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ತಿಳಿಸಿದರು.

‘ಕ್ಷೇತ್ರಪಾಲ’ ಕಥೆಯನ್ನು ಈಗಾಗಲೇ ನೋಂದಣಿ ಮಾಡಿಸಿದ್ದು, ಅದು ತಮ್ಮದೇ ಕಥೆ ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳು ತಮ್ಮ ಬಳಿ ಇವೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಲು ಸಿದ್ಧನಿದ್ದೇನೆ. ತಮ್ಮ ಸೃಜನಶೀಲ ಪರಿಶ್ರಮಕ್ಕೆ ನ್ಯಾಯ ದೊರೆಯಬೇಕು ಎಂಬುದು ತಮ್ಮ ಆಗ್ರಹ ಎಂದು ರಾಘವೇಂದ್ರ ಕುಲಾಲ್ ಹೇಳಿದರು.

Ads on article

Advertise in articles 1

advertising articles 2

Advertise under the article