ಬಟ್ಟೆ ಒಣಗಿಸುವ ವೇಳೆ ವಿದ್ಯುತ್ ಶಾಕ್: ತಾಯಿ, ಮಗ ದಾರುಣ ಸಾವು
ವಿದ್ಯುತ್ ಶಾಕ್ ತಗುಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮೂಡಬಿದ್ರೆಯ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟು ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ವರ್ಣಬೆಟ್ಟುವಿನ ಮರ್ಸಿ ಮಸ್ಕರೇನಸ್ (45) ಮತ್ತು ಅವರ ಪುತ್ರ, ಮೂಡುಬಿದಿರೆ ಹೋಲಿ ರೋಸರಿ ಕಾಲೇಜಿನ ವಿದ್ಯಾರ್ಥಿ ಶೋನ್ ಮಸ್ಕರೇನಸ್ (18) ಮೃತಪಟ್ಟವರು.
ಗುರುವಾರ ಬೆಳಗ್ಗೆ ಶೋನ್ ಬಟ್ಟೆ ಒಣಗಿಸಲು ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ.
ಬಟ್ಟೆ ಒಣಗಿಸುವ ವೇಳೆ ಶೋನ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡುತ್ತಿದ್ದುದನ್ನು ಕಂಡ ತಾಯಿ ಮರ್ಸಿ, ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೂ ವಿದ್ಯುತ್ ಆಘಾತ ತಗುಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ತೋಟದ ಕೆಲಸಕ್ಕೆಂದು ಕಾರ್ಮಿಕರೊಬ್ಬರು ಮರ್ಸಿಯವರ ಮನೆ ಸಮೀಪ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೂಡುಬಿದಿರೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.