-->
 ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನೀಡುವ 18ನೇ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ-2026 ಲಭಿಸಿದೆ. ಆಸ್ಪತ್ರೆಯ ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್‌ನ ಸಮುದಾಯ ಸೇವೆಯನ್ನು ಗುರುತಿಸಿ, ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ನವದೆಹಲಿಯ ಫಿಕ್ಕಿ ಕಚೇರಿಯಲ್ಲಿ ಅ.27ರಂದು ನಡೆದ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಡಾ. ಶಶಿ ತರೂರ್ ಪ್ರಶಸ್ತಿ ಪ್ರದಾನ ಮಾಡಿದರು. ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಈ ಬಾರಿಯ ಪ್ರಶಸ್ತಿಗೆ ಒಟ್ಟು 157 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದು, ಕಸ್ತೂರ್ಬಾ ಆಸ್ಪತ್ರೆ ಸ್ಪರ್ಧಿಸಿದ್ದ ಮೂರೂ ವಿಭಾಗಗಳಲ್ಲಿ ಅಗ್ರ ಮೂರು ಅಂತಿಮ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಪ್ರಶಸ್ತಿ ಗೆದ್ದಿದ್ದರೆ, ಆಸ್ಪತ್ರೆಯಾದ್ಯಂತ ಅನುಷ್ಠಾನಗೊಳಿಸಿದ ಸಿಎಲ್‌ಎಬಿಎಸ್‌ಐ ಸೋಂಕು ತಡೆಗಟ್ಟುವಿಕೆ ಕಾರ್ಯಕ್ರಮವು ‘ರೋಗಿ ಸುರಕ್ಷತೆಯಲ್ಲಿ ಶ್ರೇಷ್ಠತೆ’ ವಿಭಾಗದಲ್ಲಿ ಹಾಗೂ ‘Everyone is a Hero, Every Second Counts’ ಎಂಬ ಸಾರ್ವತ್ರಿಕ ಸಿಪಿಆರ್ ಮತ್ತು ತುರ್ತು ಸ್ಪಂದನ ತರಬೇತಿ ಉಪಕ್ರಮವು ‘ವರ್ಷದ ಶ್ರೇಷ್ಠ ತರಬೇತಿ ಮತ್ತು ಕೌಶಲಾಭಿವೃದ್ಧಿ ಉಪಕ್ರಮ’ ವಿಭಾಗದಲ್ಲಿ ಅಗ್ರ ಮೂರು ಸ್ಥಾನಗಳಲ್ಲಿವೆ.

ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಉಡುಪಿ-ಮಣಿಪಾಲ ಭಾಗದ ಮೊದಲ ಎದೆಹಾಲು ಬ್ಯಾಂಕ್ ಆಗಿದೆ. ಹಾಲುಣಿಸುವ ತಾಯಂದಿರು ಸ್ವಯಂಪ್ರೇರಣೆಯಿಂದ ದಾನ ಮಾಡುವ ಎದೆಹಾಲನ್ನು ಸಂಗ್ರಹಿಸಿ, ಪರೀಕ್ಷಿಸಿ, ಪಾಶ್ಚರೀಕರಿಸಿ ಸುರಕ್ಷಿತವಾಗಿ ಶೇಖರಿಸಲಾಗುತ್ತದೆ. ಅವಧಿಪೂರ್ವ ಜನಿಸಿದ, ಕಡಿಮೆ ತೂಕದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ, ತಾಯಿಯ ಹಾಲು ಲಭ್ಯವಿಲ್ಲದ ಸಂದರ್ಭದಲ್ಲಿ ಈ ಹಾಲನ್ನು ನೀಡಲಾಗುತ್ತದೆ.

ಪರಿಶೀಲನಾ ಅವಧಿಯಲ್ಲಿ 493 ತಾಯಂದಿರು ಸ್ವಯಂಪ್ರೇರಣೆಯಿಂದ 538 ಲೀಟರ್‌ಗೂ ಅಧಿಕ ಎದೆಹಾಲು ದಾನ ಮಾಡಿದ್ದು, ಇದರಿಂದ 660 ನವಜಾತ ಶಿಶುಗಳಿಗೆ ನೆರವಾಗಿದೆ. ಹಿಂದಿನ ವರ್ಷ 430 ಶಿಶುಗಳಿಗೆ 300 ಲೀಟರ್ ಹಾಲು ಪೂರೈಸಲಾಗಿತ್ತು. ದಾನಿ ಹಾಲಿನ ಬಳಕೆಯಿಂದ ಯಾವುದೇ ಪ್ರತಿಕೂಲ ಘಟನೆ ವರದಿಯಾಗಿಲ್ಲ. ಜತೆಗೆ, ನಿರಂತರ ಜಾಗೃತಿ ಮತ್ತು ಆಪ್ತಸಮಾಲೋಚನೆ ಮೂಲಕ ಎದೆಹಾಲು ದಾನದ ಮಹತ್ವದ ಕುರಿತು ಕುಟುಂಬಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.

ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಫಿಕ್ಕಿಯ ಮನ್ನಣೆ ಕಸ್ತೂರ್ಬಾ ಆಸ್ಪತ್ರೆ ಹಾಗೂ ಮಾಹೆ ಪರಿವಾರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಆಸ್ಪತ್ರೆಯ ಸೇವೆ ಕೇವಲ ಚಿಕಿತ್ಸೆಗೆ ಸೀಮಿತವಾಗದೆ, ಸಮುದಾಯದ ಬದುಕಿಗೂ ತಲುಪಬೇಕು ಎಂಬ ಆಶಯಕ್ಕೆ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಸಾಕ್ಷಿಯಾಗಿದೆ. ಪ್ರತಿ ಹನಿ ದಾನಿ ಹಾಲು ಒಂದು ಜೀವಕ್ಕೆ ದೊರೆಯುವ ಕೊಡುಗೆಯಾಗಿದ್ದು, ಹಾಲು ದಾನ ಮಾಡಿದ ತಾಯಂದಿರು, ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದರು.

ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ವೈದ್ಯಕೀಯ ಶ್ರೇಷ್ಠತೆಯೊಂದಿಗೆ ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಕಸ್ತೂರ್ಬಾ ಆಸ್ಪತ್ರೆಯ ಕಾರ್ಯಕ್ಕೆ ಈ ಪ್ರಶಸ್ತಿ ಮತ್ತೊಂದು ಮನ್ನಣೆಯಾಗಿದೆ. 157 ನಾಮನಿರ್ದೇಶನಗಳ ಪೈಕಿ ಮೂರು ವಿಭಾಗಗಳಲ್ಲೂ ಅಗ್ರ ಮೂರರಲ್ಲಿ ಸ್ಥಾನ ಪಡೆದಿರುವುದು ಆಸ್ಪತ್ರೆಯ ಸಮಗ್ರ ಸೇವೆಯ ಗುಣಮಟ್ಟವನ್ನು ತೋರಿಸುತ್ತದೆ. ಈ ಗೌರವವು ಸಮುದಾಯ ಕೇಂದ್ರಿತ ಆರೋಗ್ಯ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಪ್ರೇರಣೆಯಾಗಲಿದೆ ಎಂದರು.


 

Ads on article

Advertise in articles 1

advertising articles 2

Advertise under the article