-->
ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ, ಕತ್ತಿಯಿಂದ ಕಡಿದು ಕೊಲೆ ಯತ್ನ

ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ, ಕತ್ತಿಯಿಂದ ಕಡಿದು ಕೊಲೆ ಯತ್ನ


ಬಾಡಿಗೆ ಮುಂಗಡ ಹಣದ ವಿಚಾರದಲ್ಲಿ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಅಂಗಡಿ ಮಾಲೀಕನ ಮೇಲೆ ಆಸಿಡ್ ಎರಚಿ, ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಡುಪಿಯ ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಉಡುಪಿಯ ಶಿವಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (58) ಆಸಿಡ್ ದಾಳಿಗೊಳಗಾದವರು. ಇವರು ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದು, ವಿಷ್ಣುಮೂರ್ತಿ ನಗರದ ಮನೆಯ ಮೊದಲ ಮಹಡಿಯನ್ನು ಸುರೇಶ ಆಚಾರ್ಯ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಮುಂಗಡವಾಗಿ ನೀಡಿದ್ದ 20 ಸಾವಿರ ರೂ. ಹಣದ ವಿಚಾರದಲ್ಲಿ ವಿವಾದ ಉಂಟಾಗಿತ್ತು.

ಮನೆಯ ಗೋಡೆ ಹಾಗೂ ಟ್ಯಾಪ್‌ಗಳಿಗೆ ಹಾನಿಯಾಗಿದ್ದರಿಂದ ಎರಡು ತಿಂಗಳ ಬಾಡಿಗೆ ಮತ್ತು ದುರಸ್ತಿ ವೆಚ್ಚವನ್ನು ಮುಂಗಡ ಹಣದಲ್ಲಿ ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಸುರೇಶ ಆಚಾರ್ಯ, ಪೂರ್ಣ 20 ಸಾವಿರ ರೂ. ವಾಪಸ್ ನೀಡಬೇಕು ಎಂದು ಹೇಳಿ ನವೀನ್ ಕುಮಾರ್ ಅವರ ಅಂಗಡಿಗೆ ಬಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅ.28ರಂದು ಸಂಜೆ 3.30ರ ಸುಮಾರಿಗೆ ನವೀನ್ ಕುಮಾರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸುರೇಶ ಆಚಾರ್ಯ, ಬಾಡಿಗೆ ಮುಂಗಡ ಹಣದ ವಿಚಾರವಾಗಿ ಜಗಳವಾಡಿದ್ದಾನೆ. ಬಳಿಕ ಸ್ಕೂಟರ್‌ನಿಂದ ಬಾಟಲಿಯಲ್ಲಿ ಆಸಿಡ್ ಹಾಗೂ ದೊಡ್ಡ ಕತ್ತಿಯನ್ನು ತಂದು, ಆಸಿಡ್ ಎರಚಿದ್ದಾನೆ. ನಂತರ ಕತ್ತಿಯಿಂದ ಕಡಿಯಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article