ಆಟೋಇಮ್ಯೂನ್ ಕಾಯಿಲೆಗಳ ಚಿಕಿತ್ಸೆಯಲ್ಲಿ ಆಯುರ್ವೇದ ವೈಜ್ಞಾನಿಕ ಅನ್ವೇಷಣೆ ಅಗತ್ಯ: ಡಾ. ಮನಿಷಾ ಉಪೇಂದ್ರ
ಸ್ವಯಂ ನಿರೋಧಕ (ಆಟೋಇಮ್ಯೂನ್) ಕಾಯಿಲೆಗಳ ಚಿಕಿತ್ಸೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನದೊಂದಿಗೆ ವೈಜ್ಞಾನಿಕ ಸಂಶೋಧನೆಯನ್ನು ಸಂಯೋಜಿಸುವ ಅಗತ್ಯವಿದೆ ಎಂದು ನವದೆಹಲಿಯ ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ಪ್ರೊ. ಡಾ. ಮನಿಷಾ ಉಪೇಂದ್ರ ಕೊಥೇಕರ್ ಹೇಳಿದರು.
ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ‘ಕ್ಷಮತ್ವಮ್’ ಉದ್ಘಾಟಿಸಿ ಅವರು ಮಾತನಾಡಿದರು.
ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ವೈಜ್ಞಾನಿಕ ಸಾಧ್ಯತೆಗಳನ್ನು ಅನ್ವೇಷಿಸಬೇಕಿದೆ. ರೋಗನಿರ್ಣಯ ಸಹಿತ ಆಯುರ್ವೇದೀಯ ಚಿಕಿತ್ಸಾ ಕ್ರಮಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದ್ದು, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ರೋಗನಿರೋಧಕ ವಿಜ್ಞಾನದೊಂದಿಗೆ ಬೆಸೆಯಲು ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ. ಡಾ. ಪ್ರಸನ್ನ ಎನ್. ರಾವ್ ಮಾತನಾಡಿ, ಆಯುರ್ವೇದವನ್ನು ಜಾಗತಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕಿಸುವಲ್ಲಿ ಇಂತಹ ಅಂತರರಾಷ್ಟ್ರೀಯ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ. ಕೌಸ್ತುಭ್ ಉಪಾಧ್ಯಾಯ, ಕರ್ನಾಟಕ ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್, ಆಯುರ್ವೇದ ರಷ್ಯಾ-ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅನಿತಾ ಕರಿಲಿಯೊ ಅಕರ್ಾಸ್ ಉಪಸ್ಥಿತರಿದ್ದರು.
ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು. ಆಯುರ್ವೇದದ ಶಾಸ್ತ್ರೀಯ ಜ್ಞಾನವನ್ನು ಜಾಗತಿಕ ಆರೋಗ್ಯ ರಕ್ಷಣೆಯೊಂದಿಗೆ ಬೆಸೆಯುವ ಅನುವಾದಾತ್ಮಕ ಸಂಶೋಧನೆಯ ಮಹತ್ವವನ್ನು ಅವರು ಸಂದೇಶದಲ್ಲಿ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಡಾ. ಪದ್ಮಕಿರಣ್ ಸಿ. ಅವರ ‘ಪಂಚಕರ್ಮ ಶ್ಲೋಕ ಮಂಜರಿ’ ಹಾಗೂ ಡಾ. ಅಹರ್ಂತ್ ಕುಮಾರ್ ಎ. ಅವರ ‘ಸುಶ್ರುತ ಸಂಹಿತೆ’ಯ ಆಂಗ್ಲ ಅವತರಣಿಕೆಯನ್ನು ಅನಾವರಣಗೊಳಿಸಲಾಯಿತು.
ಪ್ರೊ. ಎಮೆರಿಟಸ್ ಡಾ. ಶ್ರೀನಿವಾಸ್ ಹೆಜಮಾಡಿ ದಿಕ್ಸೂಚಿ ಭಾಷಣ ಮಾಡಿ ಆಟೋಇಮ್ಯೂನ್ ಕಾಯಿಲೆಗಳ ಸವಾಲುಗಳು, ರೋಗನಿರೋಧಕ ವ್ಯವಸ್ಥೆ ಹಾಗೂ ಆಯುರ್ವೇದ ಸಂಶೋಧನೆಯ ಸಾಧ್ಯತೆಗಳ ಕುರಿತು ಮಾತನಾಡಿದರು.
ನಂತರ ನಡೆದ ವೈಜ್ಞಾನಿಕ ಗೋಷ್ಠಿಗಳಲ್ಲಿ ದೇಶ-ವಿದೇಶಗಳ ತಜ್ಞರು ಭಾಗವಹಿಸಿ ಆಟೋಇಮ್ಯೂನ್ ಕಾಯಿಲೆಗಳು, ರೋಗನಿರೋಧಕ ವಿಜ್ಞಾನ, ಸಂಶೋಧನಾ ವಿಧಾನಗಳು ಹಾಗೂ ಆಯುರ್ವೇದ ಚಿಕಿತ್ಸಾ ಸಾಧ್ಯತೆಗಳ ಕುರಿತು ವಿಚಾರ ಮಂಡಿಸಿದರು. ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಶೈಲಜಾ, ಬೆಂಗಳೂರು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಕೆ., ಎಸ್‌ಡಿಎಂ ಸಿಎಎಚ್‌ಆರ್‌ಸಿ ಉಡುಪಿಯ ಉಪಪ್ರಾಂಶುಪಾಲರಾದ ಡಾ. ನಿರಂಜನ್ ರಾವ್, ಡಾ. ನಾಗರಾಜ್ ಎಸ್., ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಪ್ರಸನ್ನ ಎನ್. ಮೊಗಸಾಲೆ ಹಾಗೂ ಡಾ. ಅಹರ್ಂತ್ ಕುಮಾರ್ ಎ. ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಎಂ ಕಲಾವೈಭವ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇಶ-ವಿದೇಶಗಳಿಂದ ಆಗಮಿಸಿದ ತಜ್ಞರು, ಸಂಶೋಧಕರು, ವೈದ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಡಾ. ಅರುಣ್ ಹಾಗೂ ಡಾ. ಶುಭಾ ಪಿ.ಯು. ಕಾರ್ಯಕ್ರಮ ನಿರ್ವಹಿಸಿದರು. ಡಾ. ಅಶೋಕ್ ಕುಮಾರ್ ಬಿ.ಎನ್. ವಂದಿಸಿದರು.