ಕಾಂಗ್ರೆಸ್ ಕರೆಯುತ್ತಿದೆ.. ಬಿಜೆಪಿ ಕೈಕೊಟ್ಟಿದೆ..ಯತ್ನಾಳ್ ಕೈ ಹಿಡಿಯುತ್ತಾರಾ ರಘುಪತಿ ಭಟ್..?!
ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ವದಂತಿಗಳ ನಡುವೆಯೇ ಇದೀಗ ಹಿಂದುತ್ವದ ಫಯರ್ ಬ್ರಾಂಡ್ ಬಸವನಗೌಡ ಯತ್ನಾಳ್ ನೇತೃತ್ವದ ಪಕ್ಷವೊಂದು ಉದಯವಾಗುತ್ತಿದೆ. ಆ ಪಕ್ಷಕ್ಕೆ ಉಡುಪಿಯಿಂದ ರಘುಪತಿ ಭಟ್ ಅವರೇ ಸಾರಥಿ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕ ಸ್ಥಾನದ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ರಘುಪತಿ ಭಟ್ ಪಕ್ಷೇತರರಾಗಿ ಸ್ಪರ್ಧಿಸಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ರಘುಪತಿ ಭಟ್, ಬಿಜೆಪಿ ಮಾನಸಿಕತೆಯಲ್ಲೇ ಇದ್ದಾರೆ. ಬಿಜೆಪಿ ತನ್ನನ್ನು ಕರೆದು ಸ್ಥಾನ ಕೊಟ್ಟರೆ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ರಘುಪತಿ ಭಟ್ ಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೂಡಾ ಗುಟ್ಟಾಗಿಲ್ಲ. ಹೀಗಾಗಿ ರಘುಪತಿ ಭಟ್ ಕಾಂಗ್ರೆಸ್ ಪಕ್ಷಾಂತರದ ಗಿಮಿಕ್ ಹಬ್ಬಿಸಿ, ಬಿಜೆಪಿ ನಾಯಕರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಬಲವಾಗುತ್ತಿದೆ.
ಇತ್ತ ಕರಾವಳಿಯಲ್ಲಿ ಕಾಂಗ್ರೆಸ್ ಬಲಪಡಿಸುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಉಚ್ಛಾಟಿತ ಅತೃಪ್ತ ನಾಯಕನನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್ ನಾಯಕರಿಗೆ ರಘುಪತಿ ಭಟ್ ಅವರನ್ನು ಕರೆತರುತ್ತಿರುವುದು ನುಂಗಲಾರದ ಬಿಸಿತುಪ್ಪ ಎಂಬಂತಾಗಿದೆ. ಸ್ಥಳೀಯ ನಾಯಕರ ವಿರೋಧದ ನಡುವೆಯೂ ಹಿಂದುತ್ವ ವರ್ಕೌಟ್ ಆಗುವ ಕರಾವಳಿಯಲ್ಲಿ ಹಿಂದುತ್ವದ ಪರ ನಾಯಕರನ್ನೇ ಕಣಕ್ಕಿಳಿಸುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಹೀಗಾಗಿ ರಘುಪತಿ ಭಟ್ ಅವರು ಕಾಂಗ್ರೆಸ್ ಗೆ ಬಂದರೆ ರತ್ನಗಂಬಳಿ ಹಾಕುವುದನ್ನಂತು ಅಲ್ಲಗಳೆಯುವಂತಿಲ್ಲ.
ಮತ್ತೊಂದೆಡೆ ರಘುಪತಿ ಭಟ್ ಅವರಿಗೆ ಈಗ ರಾಜಕೀಯ ಗೆಲುವು ಮುಖ್ಯವಾಗಿಲ್ಲ. ಶಾಸಕ ಯಶ್ಪಾಲ್ ಸುವರ್ಣರ ಸೋಲಿಸುವ ಹಠವಿದೆ ಎನ್ನಲಾಗುತ್ತಿದೆ. ಹೀಗಾಗಿ ಹಿಂದುತ್ವದ ಫಯರ್ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುತ್ತಿದ್ದ ಯತ್ನಾಳ್ ಪಕ್ಷದ ಮೂಲಕ ರಘುಪತಿ ಭಟ್ ಉಡುಪಿಯಲ್ಲಿ ತನ್ನ ರಾಜಕೀಯ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿದೆ, ಇದಕ್ಕೆ ಪುಷ್ಟಿ ನೀಡುವಂತೆ ಕಡಿಯಾಳಿ ಗಣೇಶೋತ್ಸವದಲ್ಲಿ ಯತ್ನಾಳ್- ರಘುಪತಿ ಭಟ್ ಮುಖಾಮುಖಿಯಾಗಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ರಘುಪತಿ ಭಟ್ ಅವರು ಮಾಡಿರುವುದು ಸ್ವಯಂಕೃತ ಅಪರಾಧ. ಬಿಜೆಪಿ ಪಕ್ಷಕ್ಕೆ ನಾಯಕನ ಅವಶ್ಯಕತೆ ಇಲ್ಲ. ಬಿಜೆಪಿಯು ಮತದಾರರು ಹಾಗೂ ಕಾರ್ಯಕರ್ತರು ಆಧರಿತ ಪಕ್ಷ. ಪಕ್ಷಕ್ಕಾಗಿ ತಳಮಟ್ಟದಿಂದಲೂ ದುಡಿದ ಅದೆಷ್ಟೋ ಕಾರ್ಯಕರ್ತರಿದ್ದಾರೆ. ಹೀಗಾಗಿ ಚುನಾವಣೆ ವೇಳೆ ಬಿಜೆಪಿಗೆ ನಾಯಕನ ಅನಿವಾರ್ಯತೆ ಇಲ್ಲ ಎಂದಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಯಾವ ನಾಯಕರೂ ನನ್ನ ಮನವೊಲಿಸಿಲ್ಲ ಎಂಬ ಭಟ್ಟರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿರುವ ಕುತ್ಯಾರು, ರಘುಪತಿ ಭಟ್ ಅವರಿಗೆ ಪಕ್ಷದ ಸಿದ್ಧಾಂತಗಳ ಬಗ್ಗೆ ಅರಿವಿದೆ. ಯಾವ ದಾರಿಯಲ್ಲಿ ಪಕ್ಷಕ್ಕೆ ಬರಬೇಕು ಎನ್ನುವುದೂ ಅವರಿಗೆ ಗೊತ್ತಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅದೇ ದಾರಿಯಲ್ಲಿ ಬಂದರೆ ಉತ್ತಮ ಎಂದಿದ್ದಾರೆ. ಬಿಜೆಪಿಗೆ ಬರುವ ಬಗ್ಗೆ ಜಿಲ್ಲಾಮಟ್ಟದ ನಾಯಕರನ್ನು ಭಟ್ಟರು ಈ ವರೆಗೆ ಸಂಪರ್ಕ ಮಾಡಿಲ್ಲ. ಪಕ್ಷಕ್ಕೆ ಯಾರನ್ನು ಸೇರಿಸಬೇಕು ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಜಿಲ್ಲಾಮಟ್ಟದಲ್ಲಿ ಇಲ್ಲ. ರಾಜ್ಯದ ನಾಯಕರ ತೀರ್ಮಾನವೇ ಅಂತಿಮ ಎಂದರು. ಕರಾವಳಿಯಲ್ಲಿ ಯಾರೂ ನಾಯಕರಲ್ಲ. ತಳಮಟ್ಟದ ಕಾರ್ಯಕರ್ತರೇ ಹಿಂದುತ್ವದ ಫಯರ್ ಬ್ರ್ಯಾಂಡ್ ಎಂದೂ ಕೂಡಾ ಟಾಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಸೇರ್ಪಡೆ ಚರ್ಚೆಯ ನಡುವೆ ಯತ್ನಾಳ್ ಪಕ್ಷದತ್ತ ರಘುಪತಿ ಭಟ್ ಮುಖ ಮಾಡಿದ್ದಾರೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮತ್ತೊಂದೆಡೆ ಬಿಜೆಪಿಯಿಂದ ದೂರವಾಗಿದ್ದರೂ ಪಕ್ಷದೊಂದಿಗಿನ ರಾಜಕೀಯ ನಂಟನ್ನು ಸಂಪೂರ್ಣವಾಗಿ ಕಡಿದುಕೊಳ್ಳದ ರಘುಪತಿ ಭಟ್, ಸೂಕ್ತ ಸಂದರ್ಭದಲ್ಲಿ ಮತ್ತೆ ಬಿಜೆಪಿಗೆ ಮರಳುವ ಇಂಗಿತ ಹೊಂದಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲೀಗ ಹರಿದಾಡುತ್ತಿದೆ.