ಸಾಗರದಲ್ಲಿ ಕವಿ ಮನೆ ಭೇಟಿ: ವಿದ್ಯಾರ್ಥಿಗಳಿಗೆ ವಿನೂತನ ವಿದ್ಯಾರ್ಜನೆಯ ಅನುಭವ
Tuesday, September 29, 2026
ವಿದ್ಯಾರ್ಜನೆ ತರಗತಿ ಕೊಠಡಿ ಅಥವಾ ಗ್ರಂಥಾಲಯಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ. ಶಿಕ್ಷಕರು ವಿಭಿನ್ನವಾಗಿ ಯೋಚಿಸಿದರೆ ಕಲಿಕೆಗೆ ಹಲವು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ಸಾಗರದ ಎಲ್.ಬಿ. ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ ‘ಕವಿ ಮನೆ ಭೇಟಿ’ ಕಾರ್ಯಕ್ರಮ ಸಾಕ್ಷಿಯಾಯಿತು.
ಎಲ್.ಬಿ. ಕಾಲೇಜಿನ ಹಳೆಯ ವಿದ್ಯಾರ್ಥಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 36 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಮೂರು ವರ್ಷ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ ಸೇವೆ ಸಲ್ಲಿಸಿರುವ ಡಾ. ಶ್ರೀಧರ್ ಎಚ್.ಜಿ. ಅವರು ನಿವೃತ್ತ ಜೀವನವನ್ನು ಸಾಗರದಲ್ಲಿ ನಡೆಸುತ್ತಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ ಓದು, ಬರವಣಿಗೆ ಹಾಗೂ ಅಧ್ಯಾಪನದಿಂದ ದೂರವಾಗದ ಅವರು ತಾವು ಓದಿದ ಎಲ್.ಬಿ. ಕಾಲೇಜಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ.
ಕನ್ನಡದ ಪ್ರಮುಖ ಬರಹಗಾರರಾಗಿರುವ ಡಾ. ಶ್ರೀಧರ್ ಅವರು ಇದುವರೆಗೆ 14 ಸಂಶೋಧನಾ ಕೃತಿಗಳು, ಮೂರು ಕಾದಂಬರಿಗಳು ಹಾಗೂ ‘ಶಿಖಂಡಿ’ ನಾಟಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ 17 ಕೃತಿಗಳನ್ನು ಸಂಪಾದಿಸಿದ್ದಾರೆ. ಅವರ ‘ಪ್ರಸ್ಥಾನ’ ಹಾಗೂ ‘ಚಪಡ’ ಕಾದಂಬರಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ.
ವಿದ್ಯಾರ್ಥಿಗಳಿಗಾಗಿ ತಮ್ಮಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದ್ದ ಡಾ. ಶ್ರೀಧರ್ ಅವರ ಮನೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದು, ಸಾಹಿತ್ಯದ ಕುರಿತು ಉಪನ್ಯಾಸ, ಚರ್ಚೆ ಹಾಗೂ ಸಂವಾದ ನಡೆಸುವ ಮೂಲಕ ಹೊಸ ಅನುಭವ ನೀಡುವ ಉದ್ದೇಶದಿಂದ ಈ ‘ಕವಿ ಮನೆ ಭೇಟಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಬರವಣಿಗೆಯ ವಿಧಾನ, ಬರವಣಿಗೆಗೆ ಅಗತ್ಯವಿರುವ ತಯಾರಿ, ತಾಳೆಗರಿಗಳ ಕುರಿತ ಮಾಹಿತಿ ಹಾಗೂ ಸಾಗರ ಸುತ್ತಮುತ್ತಲಿನ ವಿವಿಧ ಶಿಲಾಶಾಸನಗಳ ಕುರಿತು ಡಾ. ಶ್ರೀಧರ್ ಅವರಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು. ಸಾಹಿತ್ಯ ಮತ್ತು ಇತಿಹಾಸದ ವಿಚಾರಗಳ ಕುರಿತು ಸಂವಾದ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ತರಗತಿಯಾಚೆಗಿನ ಕಲಿಕೆಯ ಹೊಸ ಅನುಭವ ದೊರೆಯಿತು.
‘ತರಗತಿಯ ಪಾಠಗಳು ದಿನನಿತ್ಯದ ಕಲಿಕೆಯ ಭಾಗವಾಗಿದ್ದರೂ, ಕವಿ ಮನೆ ಭೇಟಿ ನಮಗೆ ಹೊಸ ಅನುಭವ, ಉತ್ಸಾಹ ಹಾಗೂ ಒಳಹರಿವು ನೀಡಿದೆ. ಈ ಭೇಟಿ ಶಾಶ್ವತ ನೆನಪಾಗಿ ಉಳಿಯಲಿದೆ’ ಎಂದು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎಲ್.ಬಿ. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ ಮಾಂಡ್ರೆ ಅವರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.
.jpeg)

.jpeg)