ಉಡುಪಿಯ ನೂತನ ಜಿಲ್ಲಾಸ್ಪತ್ರೆಗೆ ಹಳೆ ಉಪಕರಣಗಳ ಬಳಕೆ: ಶಾಸಕ ಯಶ್ಪಾಲ್ ಸುವರ್ಣ ಆಕ್ಷೇಪ
ಉಡುಪಿ ನೂತನ ಜಿಲ್ಲಾಸ್ಪತ್ರೆಗೆ ಹಳೆ ಆಸ್ಪತ್ರೆಯ ಯಂತ್ರೋಪಕರಣಗಳನ್ನು ಸ್ಥಳಾಂತರಿಸುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದೆ, 30 ವರ್ಷ ಹಳೆಯ ವಸ್ತುಗಳನ್ನೇ ಬಳಸಿಕೊಂಡು ಕೇವಲ ನಾಮಫಲಕ ಬದಲಾಯಿಸುವ ಪ್ರಯತ್ನ ನಡೆಸುತ್ತಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದೊಳಗೆ ಆರೋಗ್ಯ ಇಲಾಖೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಮುನ್ಸೂಚನೆ ಅಥವಾ ಸಾರ್ವಜನಿಕ ಪ್ರಕಟಣೆ ನೀಡದೆ ಒಳರೋಗಿಗಳ ವಿಭಾಗದಲ್ಲಿ ನೋಂದಣಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ಜನರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸುಮಾರು 110 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. 2021ರಲ್ಲಿ ಆರಂಭವಾದ ಕಾಮಗಾರಿ ವಿವಿಧ ಕಾರಣಗಳಿಂದ ವಿಳಂಬವಾಗಿದೆ. ಇತ್ತೀಚೆಗೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಅವರು ಮಾರ್ಚ್ ಒಳಗೆ ಅನುದಾನ ಬಿಡುಗಡೆ ಮಾಡಿ, ಮೂರು ತಿಂಗಳೊಳಗೆ ಆಸ್ಪತ್ರೆಯನ್ನು ಸಜ್ಜುಗೊಳಿಸುವ ಭರವಸೆ ನೀಡಿದ್ದರು ಎಂದು ತಿಳಿಸಿದರು.
ನೂತನ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಹಾಗೂ ನಾನ್-ಕ್ಲಿನಿಕಲ್ ಸಿಬ್ಬಂದಿ ನೇಮಕಾತಿ ಸೇರಿದಂತೆ ಸ್ಕ್ಯಾನಿಂಗ್, ಎಕ್ಸ್ರೇ, ತೀವ್ರ ನಿಗಾ ಘಟಕ (ಐಸಿಯು) ಮತ್ತು ವೆಂಟಿಲೇಟರ್ಗಳಂತಹ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ, ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು.