-->
 ಮನೆ ಮೇಲೆ  ಉರುಳಿ ಬಿದ್ದ ಬೋರ್‌ವೆಲ್ ಲಾರಿ: ಇಬ್ಬರು ಕಾರ್ಮಿಕರ ಸಾವು

ಮನೆ ಮೇಲೆ ಉರುಳಿ ಬಿದ್ದ ಬೋರ್‌ವೆಲ್ ಲಾರಿ: ಇಬ್ಬರು ಕಾರ್ಮಿಕರ ಸಾವು


ನಿಯಂತ್ರಣ ತಪ್ಪಿದ ಬೋರ್‌ವೆಲ್ ಲಾರಿಯೊಂದು ರಸ್ತೆ ಬದಿಯ ಮನೆಯ ಮೇಲೆ ಉರುಳಿಬಿದ್ದು ಲಾರೊಯಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಕಾಸರಗೋಡಿನ ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ನಡೆದಿದೆ.

ಮಧ್ಯಪ್ರದೇಶ ಮೂಲದ ದೇವೇಂದ್ರನ್ ಹಾಗೂ ಛತ್ತೀಸ್‌ಗಢ ಮೂಲದ ಮನಾಸಿರ್ ಮೃತ ಕಾರ್ಮಿಕರು. ಇಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬೋರ್‌ವೆಲ್ ಕೆಲಸ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಲಾರಿ ವರಕ್ಕಾಡ್ ಜಂಕ್ಷನ್‌ನ ಕಡಿದಾದ ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಭಾರಿ ಗಾತ್ರದ ಲಾರಿ ರಸ್ತೆ ಬದಿಯ ಜೇಸನ್ ಎಂಬುವರ ಮನೆಯ ಮೇಲೆ ಉರುಳಿಬಿದ್ದಿದೆ.

ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಲಾರಿ ಮನೆಯ ಮೇಲ್ಛಾವಣಿಗೆ ಬಿದ್ದ ಪರಿಣಾಮ ಅದರ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅಪಘಾತದ ವೇಳೆ ಮನೆಯಲ್ಲಿದ್ದ ಜೇಸನ್ ಹಾಗೂ ಕುಟುಂಬ ಸದಸ್ಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಜೆಸಿಬಿ ಹಾಗೂ ಕ್ರೇನ್‌ಗಳ ಸಹಾಯದಿಂದ ಲಾರಿಯನ್ನು ತೆರವುಗೊಳಿಸಲಾಯಿತು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article