ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ: ಇಬ್ಬರು ಯುವಕರ ದುರ್ಮರಣ
Tuesday, October 20, 2026
ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಪಿಕಪ್ ವಾಹನ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಕೊಣಾಜೆ ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕಿನ್ಯ ಅರೆಬಿನಗರದ ಮುಹಮ್ಮದ್ ಅರ್ಫಾಝ್ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ಎಂದು ಗುರುತಿಸಲಾಗಿದೆ.
ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಪಿಕಪ್ ಢಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಸಹಸವಾರನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಪಿಕಪ್ ಚಾಲಕ ವಾಹನದ ಬಾಗಿಲು ತೆರೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.