ದೀಪಾವಳಿ ವೇಳೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟದ ಪರವಾನಿಗೆ ಮಂಜೂರು ಮಾಡಲು ಅರ್ಜಿ ಅಹ್ವಾನ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರು LE-5 ರಲ್ಲಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ AE-5 ನಮೂನೆಯನ್ನು ಜಿಲ್ಲಾಧಿಕಾರಿಯವರ ಕಚೇರಿಯಿಂದ ಪಡೆದು ತಾಲೂಕು ಮಟ್ಟದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವ ಪರವಾನಿಗೆ ನೀಡಲು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸದ್ರಿ ಸಮಿತಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ ಪತ್ರವನ್ನು ಪಡೆದು ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸಿದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆಯನ್ನು ನೀಡುವ ಬಗ್ಗೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸ್ಫೋಟಕ ಕಾಯಿದೆ ಮತ್ತು ನಿಯಮ 2008 ರ ಶೆಡ್ಯೂಲ್ - IV ರಡಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಸಮಿತಿಯು ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಜಿಲ್ಲಾಧಿಕಾರಿಯವರ ಕಛೇರಿಯಿಂದ ಪಡೆದು ಅಥವಾ ಆನ್ ಲೈನ್ LSDA Portal ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ರೂ 200/- (Scrutiny Fee) ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರುಮಾಡುವ ಸಂದರ್ಭದಲ್ಲಿ ರೂ. 500/-(License Fee) ಪರವಾನಿಗೆ ಶುಲ್ಕವನ್ನು ಪಾವತಿಸಬೇಕು.
ಅರ್ಜಿಯನ್ನು ನಿಗದಿತ ನಮೂನೆ AE-5 ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ (ರಸ್ತೆ, ಕಟ್ಟಡ ಇತ್ಯಾದಿ ವಿವರ) ನೀಲಿ ನಕ್ಷೆ (BLUE PRINT), ಅರ್ಜಿದಾರರ ಭಾವಚಿತ್ರ, ಪ್ರಸ್ತಾವಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100 ರೂ ಸ್ಟಾಂಪ್ ಪೇಪರ್), ಸರಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.
ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ, ಪೊಲೀಸ್ ಅಧೀಕ್ಷಕರ ಕಚೇರಿ, ಸಂಬಂಧಪಟ್ಟ ತಹಶೀಲ್ದಾರರ ಕಚೇರಿಯಿಂದ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕವಾಗಿ ನಿರಾಕ್ಷೇಪಣಾ ಪತ್ರ ಪಡೆದು ಸಲ್ಲಿಸಬೇಕು.
ಈ ರೀತಿ ಪಡೆದ NOC (ನಿರಾಕ್ಷೇಪಣಾ ಪತ್ರ) ಗಳನ್ನು AE-5 ನಮೂನೆ, ಪ್ರಸ್ತಾವಿತ ಜಮೀನಿನ ನಕ್ಷೆ (BLUE PRINT), ಇತ್ತೀಚಿನ ಪಹಣಿ ಪತ್ರ, ದಾಖಲೆಗಳು ಹಾಗೂ ತಾಲೂಕು ಮಟ್ಟದ ಸಮಿತಿಯಿಂದ ಪಡೆದಿರುವ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು ಹಾಗೂ LSDA Portal ನಲ್ಲಿ ಕಾಣಿಸಿರುವ ನಮೂನೆಯ ಎಲ್ಲಾ ಕಲಂಗಳನ್ನು ವಿವರದೊಂದಿಗೆ ಭರ್ತಿಮಾಡಬೇಕು.
ತಾಲೂಕು ಮಟ್ಟದ ಸಮಿತಿಯು ನಿಗದಿಪಡಿಸುವ ಸಾರ್ವಜನಿಕ ವಸತಿ ಹಾಗೂ ಅಂಗಡಿ ಇರುವ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಮಾತ್ರ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಬಹುದಾಗಿರುತ್ತದೆ.
ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ, The Explosives Act 1884 Section 84 ಹಾಗೂ Explosive Rules 2008 ಕಾಯಿದೆ/ನಿಯಮಾವಳಿಗಳಿಗೆ ಒಳಪಟ್ಟು ಜಿಲ್ಲಾಧಿಕಾರಿ ಗಳ ಕಛೇರಿಯಿಂದ ಪರವಾನಿಗೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.