ಗೋ ರಕ್ಷಣೆ ಭಾವನಾತ್ಮಕ ಮಾತಿಗಷ್ಟೇ ಸೀಮಿತವಾಗದಿರಲಿ: ಗೋಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ: ಕೆ.ವಿ ನಾಗೇಶ ಅಂಗೀರಸ
ಗೋವುಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ರಾಜಕಾರಣಿಗಳು, ಗೋವುಗಳ ರಕ್ಷಣೆ ಮತ್ತು ಆರೈಕೆಗೆ ಅಗತ್ಯವಾದ ಗೋಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಗೋವುಗಳನ್ನು ಸಾಕಲು ಮುಂದಾಗುವವರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದು ಚಿಕ್ಕಮಗಳೂರು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಕೆ.ವಿ. ನಾಗೇಶ ಅಂಗೀರಸ ಹೇಳಿದರು.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀಡಾಡಿ ದನಗಳಿಗೆ ಆಶ್ರಯ ಕಲ್ಪಿಸುವುದು, ಗೋಶಾಲೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಜಾನುವಾರುಗಳ ಆರೈಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು. ಗೋಶಾಲೆಗಳಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಇದರಿಂದ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಗೋವುಗಳು ಕಸಾಯಿಖಾನೆ ಪಾಲಾಗುವ ಆತಂಕವೂ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿ ಹಸುವಿಗೆ ದಿನಕ್ಕೆ 70 ರೂ.ಗಳಂತೆ ನೆರವು ನೀಡುವ ವ್ಯವಸ್ಥೆಯಿದ್ದು, ಅದರಲ್ಲಿ ಸರ್ಕಾರದ ಪಾಲು ಶೇ.17ರಷ್ಟಿದೆ ಎಂಬ ಮಾಹಿತಿ ಇದೆ. 200 ಜಾನುವಾರುಗಳಿಗೆ ಅನ್ವಯವಾಗುವ ನೆರವಿನ ವ್ಯವಸ್ಥೆಯಿದ್ದರೂ ಗೋಶಾಲೆಗಳಿಗೆ ಸಮರ್ಪಕ ಅನುದಾನ ದೊರೆಯುತ್ತಿಲ್ಲ. ಗೋಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ತಮ್ಮ ಅನುದಾನ ಬಳಸಿದ್ದೇನೆ ಎಂದು ಒಬ್ಬರಾದರೂ ರಾಜಕಾರಣಿ ಹೇಳಲಿ ಎಂದು ಅವರು ಸವಾಲು ಹಾಕಿದರು.
ಗೋಶಾಲೆಗಳ ಸಮಸ್ಯೆಗಳ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತರಲಾಗಿದ್ದು, ಅವರು ಗೋಶಾಲೆಗಳ ಪರವಾಗಿ ಧ್ವನಿ ಎತ್ತಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ಅವರ ನಿಲುವು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು. ಈ ಹಿಂದೆ ಮೇನಕಾ ಗಾಂಧಿ ಅವರು ಪ್ರಾಣಿಗಳ ರಕ್ಷಣೆಗಾಗಿ ಧ್ವನಿ ಎತ್ತಿರುವುದನ್ನು ಹೊರತುಪಡಿಸಿದರೆ, ಪ್ರಾಣಿಗಳ ಕಲ್ಯಾಣದ ವಿಚಾರದಲ್ಲಿ ಹೆಚ್ಚಿನ ರಾಜಕಾರಣಿಗಳು ಪರಿಣಾಮಕಾರಿ ಕ್ರಮಗಳಿಗೆ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ರಕ್ಷಣೆ, ಆರೈಕೆ ಮತ್ತು ಕಲ್ಯಾಣದಲ್ಲಿ ಗೋಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಗೋಶಾಲೆಗಳಿದ್ದು, ಅವುಗಳಲ್ಲಿ ಅನೇಕ ಗೋಶಾಲೆಗಳು ಹೆಚ್ಚಿನ ಸಂಖ್ಯೆಯ ಜಾನುವಾರುಗಳಿಗೆ ಆಶ್ರಯ ನೀಡುತ್ತಿವೆ. ಆದರೆ, ಅವುಗಳ ಸಮರ್ಪಕ ನಿರ್ವಹಣೆಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಆರ್ಥಿಕ ನೆರವಿನ ಕೊರತೆಯಿದೆ. ಅರ್ಹ ಗೋಶಾಲೆಗಳನ್ನು ಗುರುತಿಸಿ ನೆರವು ನೀಡಲು ಕಂಪನಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು. ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿರುವ ಗೋಶಾಲೆಗಳಿಗೆ ಆದ್ಯತೆ ನೀಡುವುದರಿಂದ ಜಾನುವಾರುಗಳ ಕಲ್ಯಾಣದ ಜೊತೆಗೆ ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಿಗೂ ಉತ್ತೇಜನ ದೊರೆಯಲಿದೆ ಎಂದರು.