ಪಂಜಿಮೊಗರು ರಾಕೇಶ್ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರಿನ ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿಯ ನಿವಾಸಿ ರಾಕೇಶ್ ಎಂಬವರನ್ನು ತಲವಾರಿನಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು ಹಾಗೂ ಪ್ರೀತಮ್ ಯಾನೆ ಅಭಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
2019ರ ಜನವರಿ 3ರಂದು ಸುನೀಲ್ ಕುಮಾರ್ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಈ ಕೊಲೆ ನಡೆದಿತ್ತು. ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು, ಪ್ರೀತಮ್ ಯಾನೆ ಅಭಿ ಹಾಗೂ ರೋಹಿತ್ ಕುಮಾರ್ ಯಾನೆ ಶೂಟರ್ ಸೇರಿಕೊಂಡು ರಾಕೇಶ್‌ನನ್ನು ತಲವಾರಿನಿಂದ ಕಡಿದು ಕೊಲೆಗೈದಿದ್ದರು. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದೆ.
ಪ್ರಕರಣದ 1ರಿಂದ 3ನೇ ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂ 302 ಹಾಗೂ 120(ಬಿ) ಜೊತೆಗೆ 34ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 15 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ.
ಇನ್ನು ನಾಲ್ವರು ಆರೋಪಿಗಳಿಗೆ ಕಲಂ 201 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ, ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಕಲಂ 212 ಜೊತೆಗೆ 34ರ ಅಡಿಯಲ್ಲಿ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ.
ಒಟ್ಟು 70 ಸಾವಿರ ರೂ. ದಂಡದ ಮೊತ್ತದಲ್ಲಿ 20 ಸಾವಿರ ರೂ. ಸರಕಾರಕ್ಕೆ ಹಾಗೂ 50 ಸಾವಿರ ರೂ. ಮೃತ ರಾಕೇಶ್ ಅವರ ತಂದೆಗೆ ನೀಡುವಂತೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಮಾರುತಿ ಕಮಟೆ ಆದೇಶಿಸಿದ್ದಾರೆ.
ಸರಕಾರಿ ಅಭಿಯೋಜಕ ಮೋತೀಲಾಲ್ ಚೌದರಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.