-->
 ವಕೀಲರ ಮೇಲಿನ ದಾಳಿ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿ: ಪ್ರೇಮ್ ಪ್ರಸಾದ್ ಶೆಟ್ಟಿ

ವಕೀಲರ ಮೇಲಿನ ದಾಳಿ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿ: ಪ್ರೇಮ್ ಪ್ರಸಾದ್ ಶೆಟ್ಟಿ


ಕರ್ನಾಟಕ ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆ, ಜೀವ ಬೆದರಿಕೆ ಹಾಗೂ ಕೊಲೆ ಯತ್ನದ ಘಟನೆಗಳನ್ನು ಯು-ಆಕ್ಟ್ ಸಂಸ್ಥಾಪಕ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲೆ ಸಂಚಾಲಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಖಂಡಿಸಿದ್ದಾರೆ.

ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ವಕೀಲರು ನ್ಯಾಯದಾನ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು, ನ್ಯಾಯಾಲಯದ ಮೂಲಕ ನ್ಯಾಯ ದೊರಕಿಸಿಕೊಡುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂತಹ ವಕೀಲರ ಮೇಲೆಯೇ ನಿರಂತರವಾಗಿ ಭೌತಿಕ ದಾಳಿಗಳು, ಜೀವ ಬೆದರಿಕೆ ಹಾಗೂ ಕೊಲೆ ಯತ್ನಗಳು ನಡೆಯುತ್ತಿರುವುದು ನ್ಯಾಯಾಂಗ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ. ವಕೀಲರ ಮೇಲಿನ ದಾಳಿಯು ಕೇವಲ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ, ಬದಲಾಗಿ ಕಾನೂನಿನ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ವಕೀಲರ ಜೀವ ಮತ್ತು ವೃತ್ತಿ ಸುರಕ್ಷತೆಯನ್ನು ಖಾತರಿಪಡಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಜಾರಿಯಲ್ಲಿದ್ದರೂ, ಪೊಲೀಸ್ ಇಲಾಖೆಯ ತಕ್ಷಣದ ಸ್ಪಂದನೆ, ವಕೀಲರಿಗೆ ರಕ್ಷಣೆ ಒದಗಿಸುವುದು ಹಾಗೂ ದಾಳಿ ಪ್ರಕರಣಗಳ ತ್ವರಿತ ವಿಚಾರಣೆಯಲ್ಲಿ ಇನ್ನೂ ಹಲವು ಕೊರತೆಗಳಿವೆ. ಹೀಗಾಗಿ ಕಾಯ್ದೆಯಡಿ ಸಮಗ್ರ ನಿಯಮಗಳನ್ನು ರೂಪಿಸಿ, ದಾಳಿಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರು ವೃತ್ತಿಪರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಿಸುವ ಸುಳ್ಳು ಮತ್ತು ದ್ವೇಷಪೂರಿತ ದೂರುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸದೆ ಬಂಧನಕ್ಕೆ ಒಳಪಡಿಸದಂತೆ ರಕ್ಷಣಾತ್ಮಕ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯ ಸಂಕೀರ್ಣಗಳಿಗೆ ಪ್ರತ್ಯೇಕ ಭದ್ರತಾ ಪಡೆ ನಿಯೋಜನೆ, ಬಯೋಮೆಟ್ರಿಕ್ ಅಥವಾ ಪಾಸ್ ಆಧಾರಿತ ಪ್ರವೇಶ ವ್ಯವಸ್ಥೆ ಹಾಗೂ ಹೈಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಕೀಲರ ಸಂಘದ ಅಧ್ಯಕ್ಷರನ್ನು ಒಳಗೊಂಡ ಬೆದರಿಕೆ ಪರಿಶೀಲನಾ ಸಮಿತಿ ರಚಿಸಿ, ಜೀವ ಬೆದರಿಕೆ ಎದುರಿಸುತ್ತಿರುವ ವಕೀಲರಿಗೆ ತಕ್ಷಣ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ತೀವ್ರ ಜೀವ ಬೆದರಿಕೆ ಎದುರಿಸುತ್ತಿರುವ ವಕೀಲರಿಗೆ ತಕ್ಷಣ ತಾತ್ಕಾಲಿಕ ಪೊಲೀಸ್ ರಕ್ಷಣೆ ಒದಗಿಸುವ ವ್ಯವಸ್ಥೆ, ವಕೀಲರ ಮೇಲಿನ ದಾಳಿ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಹಾಗೂ ದಿನನಿತ್ಯದ ವಿಚಾರಣೆ ಮೂಲಕ ಶೀಘ್ರ ನ್ಯಾಯ ದೊರಕಿಸಿಕೊಡುವ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ತಕ್ಷಣ ಕ್ರಮ ಕೈಗೊಂಡು ರಾಜ್ಯದ ವಕೀಲರಿಗೆ ಸಮಗ್ರ ಭದ್ರತೆ ಮತ್ತು ವೃತ್ತಿ ಸ್ವಾತಂತ್ರ್ಯ ಖಾತರಿಪಡಿಸಬೇಕು ಎಂದು ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article