
Bangalore: ಲೋಕಾಯುಕ್ತ ದಾಳಿ; ರೂ. 24 ಕೊಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ರಾಜ್ಯದ 4 ಜಿಲ್ಲೆಗಳ 6 ನಗರಗಳಲ್ಲಿ ಸರಕಾರಿ ಅಧಿಕಾರಿಗಳ ಕಚೇರಿ, ಮನೆ ಹಾಗೂ ಅವರ ಆಪ್ತ ಸಂಬಂಧಿಗಳ ಮನೆಗಳಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ರೂ. 24 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಎಂಬುವರ ಮನೆ ಮೇಲೆ ದಾಳಿ ನಡೆಸಿ ಎರಡು ಮನೆಗಳು ಹಾಗೂ ಎರಡು ಸೈಟುಗಳ ಸಹಿತ ಒಟ್ಟು ರೂ. 4.78 ಕೋಟಿ ಮೌಲ್ಯದ ಸ್ಥಿರ ಆಸ್ಥಿಯನ್ನು ಅಕ್ರಮವಾಗಿ ಗಳಿಸಿರುವುದನ್ನು ಪತ್ರೆ ಹಚ್ಚಿದ್ದಾರೆ. ರೂ. 1.5 ಕೋಟಿಗೂ ಅಧಿಕ ಮೌಲ್ಯದ ನಗದು, ಚಿನ್ನ-ಬೆಳ್ಳಿ ಆಭರಣಗಳನ್ನೂ, ಹಲವು ವಾಹನಗಳನ್ನು ಪತ್ತೆ ಹಚ್ಚಲಾಗಿದೆ.
ಬಿಬಿಎಂಪಿಯ ತೆರಿಗೆ ಅಧಿಕಾರಿ ಎನ್. ವೆಂಕಟೇಶ್ ಅವರ ಮನೆ ಮೇಲೆ ದಾಳಿ ನಡೆಸಿ ಒಟ್ಟು ರೂ. 2.25 ಕೋಟಿ ಮೌಲ್ಯದ ಮೂರು ಮನೆಗಳು, ಎರಡು ಸೈಟುಗಳು ಹಾಗೂ ಒಂದು ಫಾರ್ಮ್ ಹೌಸ್ ಅನ್ನು ಅಕ್ರಮವಾಗಿ ಹೊಂದಿರುವುದನ್ನು ಪತ್ತೆ ಮಾಡಲಾಗಿದೆ. ಒಟ್ಟು ರೂ. 35 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮವಾಗಿ ಸಂಪಾದಿಸಿದ ಚರ ಸೊತ್ತನ್ನು ಪತ್ತೆ ಮಾಡಲಾಗಿದೆ.