
Gangolli: ಮೀನುಗಾರಿಕಾ ದೋಣಿ ದುರಂತ; ಮೀನುಗಾರನ ಶವ ಪತ್ತೆ
17/07/2025 05:50 AM
ಗಂಗೊಳ್ಳಿಯಲ್ಲಿ ಮೀನುಗಾರಿಕಾ ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರ ಸುರೇಶ್ ಖಾರ್ವಿ ಅವರ ಮೃತದೇಹ ಕೋಡಿ ಸೀವಾಕ್ ಸಮೀಪ ಜುಲೈ 17ರಂದು ಬೆಳಗ್ಗೆ 6 ಗಂಟೆಗೆ ಪತ್ತೆಯಾಗಿದೆ.
ಗಂಗೊಳ್ಳಿಯ ದಿವಂಗತ ಶೀನ ಖಾರ್ವಿ ಎಂಬವರ ಪುತ್ರ ಜಗನ್ನಾಥ ಖಾರ್ವಿ(50) ಎಂಬವರ ಮೃತದೇಹ ಜುಲೈ 16ರಂದು ಸಂಜೆ ವೇಳೆಗೆ ಪತ್ತೆಯಾಗಿತ್ತು. ಗಂಗೊಳ್ಳಿಯ ಬಂದರಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಜುಲೈ 15ರಂದು ಅಲೆಗಳ ರಭಸಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಘಟನೆಯಲ್ಲಿ ಮೂವರು ಮೀನುಗಾರರು ಸಮುದ್ರ ಪಾಲಾಗಿದ್ದರೆ, ಓರ್ವ ಈಜಿ ದಡ ಸೇರಿದ್ದರು. ಜುಲೈ 16ರ ಬೆಳಗ್ಗೆ ಬೇಲಿಕೇರಿ ನಿವಾಸಿ ಲೋಹಿತ್ ಖಾರ್ವಿ ಎಂಬವರ ಮೃತದೇಹ ಕೋಡಿ ಲೈಟ್ ಹೌಸ್ ಸಮೀಪ ಪತ್ತೆಯಾಗಿತ್ತು. ಸಂಜೆ ಜಗನ್ನಾಥ್ ಖಾರ್ವಿ ಅವರ ಮೃತದೇಹ ಪತ್ತೆಯಾಗಿದ್ದು, ಸುರೇಶ್ ಖಾರ್ವಿ ಅವರ ಮೃತದೇಹ ಜುಲೈ 17ರಂದು ಬೆಳಗ್ಗೆ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.