Mangalore:  ಹೆಬ್ಬಾವಿನ ಮರಿ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ

Mangalore: ಹೆಬ್ಬಾವಿನ ಮರಿ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ


ಹೆಬ್ಬಾವಿನ ಮರಿ ಮಾರಾಟ ಜಾಲವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಸ್ಟೇಟ್ ಬ್ಯಾಂಕ್ ಬಳಿಯ ಸಾಕುಪ್ರಾಣಿ ಅಂಗಡಿ ಮಾಲಕ ಉಳ್ಳಾಲ ಮುನ್ನೂರು ಗ್ರಾಮದ ಇಬ್ರಾಹೀಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬಂದಿ ಉಳ್ಳಾಲ ಹರೇಕಳ ಗ್ರಾಮದ ಮಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ 16 ವರ್ಷದ ಬಾಲಕ ಗುರುತಿಸಲಾಗಿದೆ. ಮಂಗಳೂರು ರೇಂಜ್ ಫಾರೆಸ್ಟ್ ಆಫೀಸರ್ ರಾಜೇಶ್ ಬಾಳಿಗಾರ್ ನೇತೃತ್ವದ ಅರಣ್ಯ ಇಲಾಖೆಯ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದೆ. ಹೆಬ್ಬಾವು ಖರೀದಿಸುವ ನೆಪದಲ್ಲಿ ತಂಡವು ವಿಹಾಲ್ ಎಂಬಾತನನ್ನು ಸಂಪರ್ಕಿಸಿದೆ. ಕದ್ರಿಯ ಅಶ್ವಥ್ ಕಟ್ಟೆ ಬಳಿ ವಿಹಾಲ್ ಹಾವನ್ನು 45,000 ರೂಪಾಯಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದು, ಖರೀದಿದಾರರಿಗೆ ಹಾವನ್ನು ತೋರಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ಅಲ್ಲದೇ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಸಾಕು ಪ್ರಾಣಿ ಮಾರಾಟ ಅಂಗಡಿಯಲ್ಲೂ ಹಾವು ಮಾರಾಟ ನಡೆಯುತ್ತಿದೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಿ, ಅಂಗಡಿ ಮಾಲಕ ಹಾಗೂ ಸಿಬಂದಿಯನ್ನು ಬಂಧಿಸಿದ್ದಾರೆ. ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅವುಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣ ಕಾಯ್ದೆ 1972ರ ಅನುಸೂಚಿತ (ಶೆಡ್ಯೂಲ್ 1) ಭಾಗ ಸಿ ಯಡಿ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್ (ಹೆಬ್ಬಾವು)ಅನ್ನು ಹೊರ ದೇಶ ಅಂದರೆ ಬರ್ಮಿಸ್ ಬಾಲ್ ಪೈಥಾನ್ ಎಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ವನ್ಯ ಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನು ಕೆಲವರು ಮನೆಯಲ್ಲಿ ಸಾಕುವ ಉದ್ದೇಶದಿಂದ ಖರೀದಿಸುತ್ತಿದ್ದರು. ಈ ಜಾಲಕ್ಕೆ ತಮಿಳುನಾಡು ವರೆಗೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ. ಕ್ಲಿಫರ್ಡ್ ಲೋಬೊ ಅವರ ನಿರ್ದೇಶನದಂತೆ ಮುಂದಿನ ತನಿಖೆ ನಡೆಯಲಿದೆ.









Ads on article

Advertise in articles 1

advertising articles 2

Advertise under the article