
Udupi: ನಕಲಿ ನೋಂದಣಿ ಫಲಕ ಅಳವಡಿಸಿ ಚಾಲನೆ; ಖಾಸಗಿ ಬಸ್ ಆರ್‌ಟಿಓ ವಶ
26/07/2025
ನಕಲಿ ನೋಂದಣಿ ಫಲಕವನ್ನು ಪ್ರದರ್ಶಿಸಿ ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಆರ್‌ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸೂರಜ್ ಮಾಲಕತ್ವದ ಅಂಬಿಕಾ (KA20AB4242) ಹೆಸರಿನ ಬಸ್ಸನ್ನು ಮುಟ್ಟುಗೋಲು ಹಾಕಲಾಗಿದೆ.
ಕೆ. ಉಮೇಶ್ ಎಂಬವರು ಚಲಾಯಿಸುತ್ತಿದ್ದು, ರಾಜೇಂದ್ರ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಸ್ ಉಡುಪಿಯಿಂದ ಕುಂದಾಪುರ ಮಾರ್ಗವಾಗಿ ಸಂಚರಿಸುತ್ತಿತ್ತು. ಆರ್ ಟಿ ಒ ಅಧಿಕಾರಿಗಳು ಬಸ್‌ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವಾಹನದ ಅಡಿಗಟ್ಟು ಸಂಖ್ಯೆ MAT751120KFJ13668 ಆಗಿದ್ದು, ಯಂತ್ರದ ಸಂಖ್ಯೆ 497TC41JPY829428 ಆಗಿರುವುದು ಕಂಡು ಬಂದಿದೆ. ಈ ಸಂಖ್ಯೆ KA20AA8756 ವಾಹನದ್ದಾಗಿರುತ್ತದೆ. ವಾಹನಕ್ಕೆ ನಕಲಿ ನೋಂದಣಿ ಫಲಕವನ್ನ ಅಳವಡಿಸಿ ಸಂಚರಿಸುತ್ತಿರುವುದು ಕಂಡು ಬಂದಿದೆ.
ವಾಹನದ ಚಾಲಕನನ್ನ ವಿಚಾರಿಸಿದಾಗ ವಾಹನದ ಯಾವುದೇ ದಾಖಲೆಗಳು ಹಾಗೂ ಚಾಲನಾ ಪರವಾನಿಗೆ ಇರಲಿಲ್ಲ. ಹೀಗಾಗಿ ಬಸ್ಸನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರ್ ಟಿ ಒ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.