
Udupi: ವೈದ್ಯ ದಿನಾಚರಣೆ; ಸಾಧಕ ಯುವ ವೈದ್ಯರಿಗೆ ಸನ್ಮಾನ
24/07/2025
ಅಂತರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಇಬ್ಬರು ಯುವ ವೈದ್ಯರನ್ನು ಸನ್ಮಾನಿಸುವ ಮೂಲಕ ವೈದ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಉದ್ಯಾವರ ಬಲಾಯ್ ಪಾದೆಯ ನಿತ್ಯಾನಂದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುರ್ವೇದಿಕ್ ವೈದ್ಯೆ ಡಾ. ಸಿಲ್ವಿನಿಯಾ ಫೆರ್ನಾಂಡಿಸ್ ಲೋಬೊ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂ.ಎಸ್. ಇ.ಎನ್.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಡಾ. ಆನೆಟ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಎರಡರ ವಲಯ ಅಧ್ಯಕ್ಷ ಲ. ಲೂವಿಸ್ ಲೋಬೊ, ವೈದ್ಯರು ಹೇಳಿದಂತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಸಮಾಜದಲ್ಲಿ ಯಾವುದಕ್ಕೂ ಕಡಿವಾಣ ಹಾಕಲು ಸಾಧ್ಯವಾಗದೇ ಇದ್ದರೂ, ನಮ್ಮ ಆರೋಗ್ಯದ ಮೇಲೆ ಹಿಡಿತವನ್ನು ಸಾಧಿಸಬೇಕು. ವೈದ್ಯರು ಹೇಳಿದಂತೆ ನಮ್ಮ ಜೀವನ ಶೈಲಿಯನ್ನು ನಾವು ಬದಲಾಯಿಸಬೇಕು. ಬಹಳಷ್ಟು ವೈದ್ಯರು ಮಾನವೀಯ ನೆಲೆಯಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದು ಇದೆ. ಇಂತಹ ವೈದ್ಯರು ಎಲ್ಲರಿಗೂ ಮಾದರಿ ಎಂದರು.
ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಜೆರಾಲ್ಡ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ರೊನಾಲ್ಡ್ ರೆಬೆಲ್ಲೊ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಡ್ವಿನ್ ಲುವಿಸ್ ಸ್ವಾಗತಿಸಿದರೆ, ಕೋಶಾಧಿಕಾರಿ ಆಲ್ವಿನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.