Udupi: ಹೆಚ್ಚುತ್ತಿರುವ ಆನ್‌ಲೈನ್ ವಂಚನೆ; ನೋಡೆಲ್ ಅಧಿಕಾರಿ ನೇಮಕಕ್ಕೆ ಎಸ್ಪಿ ಸೂಚನೆ
23/07/2025
ಉಡುಪಿ ನಗರದಲ್ಲಿ ಆನ್‌ಲೈನ್ ವಂಚನೆ ಸಂಬOಧ ಪೊಲೀಸ್ ಇಲಾಖೆ ಹಾಗೂ ಬ್ಯಾಂಕ್‌ಗಳ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸುವ ಕುರಿತು ಚಿಂತಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.
ಇತ್ತೀಚೆಗೆ ನಡೆಯುತ್ತಿರುವ ಆನ್‌ಲೈನ್ ವಂಚನೆ, ಮೋಸ ವಿಷಯಗಳ ಬಗ್ಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜುಲೈ 23ರಂದು ಆಯೋಜಿಸಲಾದ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕ್ ಮ್ಯಾನೇಜರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆವೈಸಿ ಖಾತೆಯ ಮಾಹಿತಿ, ಖಾತೆ ಪ್ರೀಜ್ ಹಾಗೂ ಅನ್ ಪ್ರೀಜ್ ಮಾಡುವ ಬಗ್ಗೆ ಮತ್ತು ಎಟಿಎಂಗಳಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ತನಿಖೆಯ ಪ್ರಯುಕ್ತ ಕೇಳಿದಾಗ ಆದಷ್ಟು ಶೀಘ್ರದಲ್ಲಿ ಒದಗಿಸುವ ಕುರಿತು ತಿಳಿಸಲಾಯಿತು. ನಕಲಿ ಖಾತೆಗಳ ಬಗ್ಗೆ, ಅಕ್ರಮ ವಲಸಿಗರ ಖಾತೆಗಳ ಬಗ್ಗೆ ಮಾಹಿತಿಯನ್ನು ಇಲಾಖೆ ಜೊತೆ ಹಂಚಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಎಸ್ಪಿ ತಿಳಿಸಿದರು. ಈ ವಿಚಾರಗಳಿಗೆ ಬ್ಯಾಂಕ್ ಅಧಿಕಾರಿಗಳೂ ಕೂಡಾ ಸಹಮತ ವ್ಯಕ್ತಪಡಿಸಿದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷಾ ಪ್ರಿಯಂ ವಧಾ, ಉಡುಪಿ ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಹರೀಶ್ ಜಿ ಉಪಸ್ಥಿತರಿದ್ದರು. ಸಭೆಯಲ್ಲಿ 140ಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.