ಆಟೋ ರಿಕ್ಷಾ ಪಲ್ಟಿ; ಬಾಲಕ ಸಾವು, ಐದು ಮಂದಿಗೆ ಗಾಯ
Monday, November 17, 2025
ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಪಲ್ಟಿಯಾಗಿ 12 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕುತ್ರೊಟ್ಟು ಟಿ.ಬಿ. ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನ.16ರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಮೃತ ಬಾಲಕನನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಅವರ ಪುತ್ರ ತನ್ವಿತ್ (12) ಎಂದು ಗುರುತಿಸಲಾಗಿದೆ. ನಾವೂರಿನ ಶಶಿ ಎಂಬವರ ಆಟೋರಿಕ್ಷಾದಲ್ಲಿ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕಾಗಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತನ್ವಿತ್‌ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಇತರ ಐದು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.