-->
 ಅಬ್ಬಾ..! ಚಿಕನ್, ಮಟನ್‌ಗಿಂತಲೂ ನುಗ್ಗೆ ದುಬಾರಿ, ಕೆಜಿಗೆ 700 ರೂಪಾಯಿ..!

ಅಬ್ಬಾ..! ಚಿಕನ್, ಮಟನ್‌ಗಿಂತಲೂ ನುಗ್ಗೆ ದುಬಾರಿ, ಕೆಜಿಗೆ 700 ರೂಪಾಯಿ..!


ಕಳೆದ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ನುಗ್ಗೆ ಬೆಲೆ ಏರಿಕೆಯಾಗುತ್ತಲೇ ಇದ್ದು, ಒಂದು ಕೆಜಿ ನುಗ್ಗೆಕಾಯಿ ಬೆಲೆ 700 ರೂಪಾಯಿ ದಾಟಿದೆ. 


ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ ಬೆಲೆಗಳು ಗಗನಕ್ಕೇರುತ್ತಿದೆ. ಈಗ ನುಗ್ಗೆಕಾಯಿಯ ಸರದಿ. ಟೊಮೆಟೊ ಬೆಲೆ 60 ರೂಪಾಯಿ ದಾಟಿದಾಗ ಕಂಗಾಲಾಗಿದ್ದ ಗ್ರಾಹಕರು, ಮಾರುಕಟ್ಟೆಯಲ್ಲಿ ನುಗ್ಗೆಕಾಯಿಯ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಕಳೆದ 3 ದಿನಗಳಿಂದ ನುಗ್ಗೆಕಾಯಿಯ ಬೆಲೆ ಏರಿಕೆಯಾಗುತ್ತಲೇ ಇದೆ. 3 ದಿನದ ಹಿಂದೆ ನುಗ್ಗೆಕಾಯಿ ಕೆಜಿಗೆ 500 ರೂಪಾಯಿ ಇತ್ತು. ಇದೀಗ ಒಂದು ಕೆಜಿ ನುಗ್ಗೆಕಾಯಿ ಬೆಲೆ 700 ರೂಪಾಯಿಯಾಗಿದೆ. 

ನುಗ್ಗೆಕಾಯಿ ಬೆಳೆಯನ್ನು ಇತರ ಬೆಳೆಗಳಂತೆ ಎಲ್ಲಾ ಕಡೆ ಬೆಳೆಯುವುದಿಲ್ಲ. ಹೆಚ್ಚಾಗಿ ತಮಿಳುನಾಡಿನಲ್ಲಿ ನುಗ್ಗೆ ಬೆಳೆಯಲಾಗುತ್ತದೆ. ಇತ್ತೀಚೆಗೆ ಚಂಡಮಾರುತದ ಪರಿಣಾಮದಿಂದಾಗಿ ಇಳುವರಿ ಕಡಿಮೆಯಾಗಿತ್ತು. ಹೀಗಾಗಿ ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದು, ಚಿಕನ್ ಮಟನ್‌ಗಿಂತಲೂ ನುಗ್ಗೆ ದುಬಾರಿಯಾಗಿದೆ. 

ಈ ಹಿಂದೆ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಸಿಗುತ್ತಿದ್ದ ತರಕಾರಿಗಳಲ್ಲಿ ನುಗ್ಗೆಕಾಯಿಯೂ ಒಂದಾಗಿತ್ತು. ಒಂದು ಕಾಯಿಗೆ 5 ಅಥವಾ 10 ರೂಪಾಯಿಯಿತ್ತು. ಈಗ ಒಂದು ನುಗ್ಗೆಕೋಡು ಬೆಲೆ 50 ರಿಂದ 60 ರೂಪಾಯಿ ಆಗಿದೆ. ನುಗ್ಗೆ ಬೆಲೆ 10 ರೂಪಾಯಿ ಎಂದು ಬೆಲೆ ಕೇಳದೆ ಖರೀದಿಸಿದರೆ ಗ್ರಾಹಕನ ಜೇಬಿಗೆ ಕತ್ತರಿ ಬೀಳುವುದಂತು ಗ್ಯಾರಂಟಿ. 

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಕೆಜಿ ನುಗ್ಗೆಕಾಯಿ ಬೆಲೆ 600 ರಿಂದ 700 ರೂಪಾಯಿಯಾಗಿದೆ. ಕಳೆದ ತಿಂಗಳು 150ರಿಂದ 200 ಇದ್ದ ನುಗ್ಗೆ ಬೆಲೆ ಮೂರು ಪಟ್ಟು ಜಿಗಿದಿದೆ. ಹೀಗಾಗಿ ಮಾರಾಟಗಾರರು ಕೂಡಾ ದುಬಾರಿ ಹಣ ಪಾವತಿಸಿ ನುಗ್ಗೆ ಖರೀದಿಸುವುದನ್ನೇ ಬಿಟ್ಟಿದ್ದಾರೆ. ಬೆಲೆ ಏರಿಕೆಯಾದರೂ ನುಗ್ಗೆ ಖರೀದಿಸುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ನುಗ್ಗೆ ಆರೋಗ್ಯಕ್ಕೆ ಬಲು ಉಪಕಾರಿ. ರಕ್ತ ಶುದ್ಧೀಕರಿಸಲು, ಮಧುಮೇಹ ನಿಯಂತ್ರಣ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಕಬ್ಬಿಣಾಂಶ ಕೊರತೆ ಇರುವವರಿಗೆ ನುಗ್ಗೆಕಾಯಿ ಬಲು ಉಪಕಾರಿ. ಹೀಗಾಗಿ ಬೆಲೆ ಏರಿಕೆಯಾದರೂ ದುಬಾರಿ ಹಣ ಕೊಟ್ಟಾದರೂ ನುಗ್ಗೆಕಾಯಿ ಖರೀದಿಸುತ್ತಾರೆ. 

ಮುಂಬರುವ ತಿಂಗಳು ನುಗ್ಗೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಗೃಹಿಣಿಯರಂತು ನುಗ್ಗೆ ಖರೀದಿಸಲು ಹಿಂದೇಟು ಹಾಕುತ್ತಿದ್ದು, ಬೆಲೆ ಇಳಿಕೆಯಾದ ಮೇಲೆ ತಿಂದರಾಯ್ತು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ದಿನೇ ದಿನೇ ಏರಿಕೆಯಾಗುವ ತರಕಾರಿ ಬೆಲೆಗಳಿಂದಾಗಿ ಜನ ಕಂಗಾಲಾಗಿದ್ದು, ತಿಳಿ ಸಾರೇ ಗತಿ ಎನ್ನುವಂತಾಗಿದೆ. 



Ads on article

Advertise in articles 1

advertising articles 2

Advertise under the article