ಮುಂದುವರಿದ ಇಂಡಿಗೋ ಅಡಚಣೆ; ನೂರಾರು ವಿಮಾನ ಹಾರಾಟ ರದ್ದು
Friday, December 05, 2025
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಉಂಟಾಗಿರುವ ಅಡಚಣೆ 5ನೇ ದಿನಕ್ಕೆ ಕಾಲಿಟ್ಟಿದೆ. ಸಿಬ್ಬಂದಿ ರೋಸ್ಟರಿಂಗ್ ನಿಯಮಗಳು, ತಾಂತ್ರಿಕ ಸಮಸ್ಯೆ ಹಾಗೂ ಕಾರ್ಯಾಚರಣೆ ದೋಷಗಳಿಂದ ಇಂದು ಕೂಡ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಇಂದು) ಮಧ್ಯರಾತ್ರಿ ವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟವನ್ನ ಸಂಪೂರ್ಣ ರದ್ದುಗೊಳಿಸಿರುವುದಾಗಿ ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಹಠಾತ್ತನೇ ಫ್ಲೈಟ್ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರಯಾಣಿಕರು ಹಾಗೂ ಏರ್‌ಪೋರ್ಟ್ ಸಿಬ್ಬಂದಿ ನಡುವೆ ವಾಗ್ವಾದವೂ ಉಂಟಾಗಿದೆ.
ದೆಹಲಿ ಏರ್‌ಪೋರ್ಟ್ನ ಟರ್ಮಿನಲ್‌ಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯರಾತ್ರಿ 11:59ರ ವರೆಗೆ ಎಲ್ಲಾ ಇಂಡಿಗೋ ದೇಶಿಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಅದಕ್ಕೆ ಮುಂಚಿತವಾಗಿ ಇಲ್ಲಿಂದ ನಿರ್ಗಮಿಸಬೇಕಿರುವ ಪ್ರಯಾಣಿಕರು ಏರ್‌ಪೋರ್ಟ್ಗೆ ಬಾರದಂತೆ ಮನವಿ ಮಾಡಿದ್ದಾರೆ. ಇಂಡಿಗೋ ಇಂದು ಒಂದೇ ದಿನ ಬೆಂಗಳೂರು, ದೆಹಲಿ, ಹೈದರಾಬಾದ್ ಹಾಗೂ ಇತರ ಏರ್‌ಪೋರ್ಟ್ಗಳಿಂದ ಒಟ್ಟು 700 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.

