ಇಂಡಿಗೋ ಸಮಸ್ಯೆ ಸಮಸ್ಯೆ; ಪೈಲಟ್ ರಜೆ ನಿಯಮ ಸಡಿಲಿಸಿದ ಡಿಜಿಸಿಎ
ದೇಶಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ಸಮಸ್ಯೆಯಾದ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನ್ನ ನಿಯಮಗಳನ್ನು ಸಡಿಲಿಸಿದೆ.
ವಿಮಾನಯಾನ ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ರಜೆಯನ್ನು ಬದಲಾಯಿಸಬಾರದು ಎಂಬ ತನ್ನ ಇತ್ತೀಚಿನ ನಿರ್ದೇಶನವನ್ನು ಡಿಜಿಸಿಎ ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದೆ. 24 ಗಂಟೆಗಳಿಗಿ0ತ ಕಡಿಮೆ ಅವಧಿಯಲ್ಲಿ ಡಿಜಿಸಿಎ ತನ್ನ ಎಫ್‌ಡಿಟಿಎಲ್ ಮಾನದಂಡಗಳಿಗೆ ಮಾಡಿದ ಎರಡನೇ ಬದಲಾವಣೆ ಇದಾಗಿದೆ. ಗುರುವಾರ ರಾತ್ರಿ ಪೈಲಟ್ ಹಾರಾಟ ನಡೆಸಬಹುದಾದ ಸತತ ಗಂಟೆಗಳ ಸಂಖ್ಯೆಯ ಮಿತಿಯನ್ನು 12 ರಿಂದ 14 ಕ್ಕೆ ವಿಸ್ತರಿಸಿತ್ತು.
ಕಳೆದ 2 ದಿನಗಳಿಂದ ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಇಂಡಿಗೋ ರದ್ದು ಮಾಡಿತ್ತು. ದಿಢೀರ್ ರದ್ದು ಮಾಡಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರಯಾಣ ದಟ್ಟಣೆ ಹೆಚ್ಚಾಗಿದೆ.
ಭಾರತದ ವಿಮಾನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಹಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೈಲಟ್‌ಗಳ ಕೊರತೆ ಇದ್ದರೂ ಇರುವ ಪೈಲಟ್‌ಗಳ ಮೇಲೆ ಕಂಪನಿಗಳು ಹೆಚ್ಚಿನ ಒತ್ತಡ ಹಾಕಿಸುತ್ತವೆ ಎಂಬ ದೂರುಗಳು ಬರುತ್ತಿದ್ದವು. ಸಿಬ್ಬಂದಿ ಆರೋಗ್ಯ, ಮಾನಸಿಕ ಆರೋಗ್ಯ ಇತ್ಯಾದಿ ಸಮಸ್ಯೆಯನ್ನು ಪರಿಗಣಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ನೀಡಲು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಕಂಪನಿಗಳು ಈಗ ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಕಾರಣ ಇಂಡಿಗೋ ಕಾರ್ಯಾಚರಣೆಯಲ್ಲಿ ಸಮಸ್ಯೆ ಆರಂಭವಾಗಿದೆ.
ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಒಂದು ದಿನದಲ್ಲಿ ಒಟ್ಟು 10-13 ಗಂಟೆ ಕರ್ತವ್ಯ ಮಾಡಬಹುದಿತ್ತು. ಆದರೆ ವಿಮಾನಯಾನ ರೋಸ್ಟರ್ ಮಾನದಂಡಗಳ ಪ್ರಕಾರ ಈಗ ಗರಿಷ್ಠ 10 ಗಂಟೆ ಮಾತ್ರ ನಿಗದಿ ಮಾಡಲಾಗಿದೆ.
ಈ ಮೊದಲು ವಾರದಲ್ಲಿ ಕನಿಷ್ಠ 36 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 48 ಗಂಟೆ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಬಳಿಕ 10 ಗಂಟೆ ವಿಶ್ರಾಂತಿ ಪಡೆಯಬಹುದಾಗಿತ್ತು. ಆದರೆ ಈಗ ಈ ಅವಧಿಯನ್ನು12 ಗಂಟೆಗೆ ವಿಸ್ತರಿಸಲಾಗಿದೆ. ಮೊದಲು ರಾತ್ರಿ ಸಮಯದಲ್ಲಿ 6 ಬಾರಿ ಲ್ಯಾಂಡಿ0ಗ್ ಮಾಡಲು ಅವಕಾಶವಿತ್ತು. ಆದರೆ ಈಗ 2 ಬಾರಿ ಮಾತ್ರ ಲ್ಯಾಂಡಿ0ಗ್‌ಗೆ ಅವಕಾಶ ನೀಡಲಾಗಿದೆ.
ದಿನಕ್ಕೆ 8-10 ಗಂಟೆಗಳು, ವಾರಕ್ಕೆ 30 ಗಂಟೆಗಳು ಅಥವಾ 28 ದಿನಗಳಲ್ಲಿ ಗರಿಷ್ಠ100 ಗಂಟೆ ವಿಮಾನ ಹಾರಾಟಕ್ಕೆ ಸಮಯ ಮಿತಿಯನ್ನು ಹಾಕಲಾಗಿದೆ. ಇದು ವಾರ್ಷಿಕವಾಗಿ 1,000 ಗಂಟೆಗಳಿಗಿ0ತ ಹೆಚ್ಚಿರಬಾರದು. ಯಾವುದೇ ವಿಮಾನಯಾನ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಈ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ.