ಡ್ರಗ್ ಫ್ಯಾಕ್ಟರಿ ಪತ್ತೆ ಪ್ರಕರಣ; ಮೂವರು ಪೊಲೀಸ್ ಇನ್ಸ್ಪೆಕ್ಟರ್ ಗಳ ಅಮಾನತು
ಬೆಂಗಳೂರು ನಗರದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಅವರು, ಕೊತ್ತನೂರು, ಬಾಗಲೂರು, ಅವಲಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ಎಎನ್‌ಟಿಎಫ್‌ನಿಂದ ಬೆಂಗಳೂರಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಸೀಜ್ ಮಾಡಿ, ಬರೋಬ್ಬರಿ 55.88 ಕೋಟಿ ರೂ. ಮೌಲ್ಯದ ಎಂಡಿ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೇ ವೇಳೆ ನಾಲ್ವರು ಆರೋಪಿಗಳನ್ನು ಕೂಡ ಬಂಧಿಸಲಾಗಿತ್ತು. ಇದೀಗ ಬಾಗಲೂರು ಠಾಣಾ ಇನ್ಸ್ಪೆಕ್ಟರ್ ಶಬರೀಶ್, ಕೊತ್ತನೂರು ಠಾಣಾ ಇನ್ಸ್ಪೆಕ್ಟರ್ ಚೇತನ್ ಹಾಗೂ ಅವಲಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಾಮಕೃಷ್ಣ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಲಾದ ಮೂರೂ ಠಾಣೆಗಳಿಗೆ ಪ್ರಭಾರ ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಲಾಗಿದೆ.
ಬಾಗಲೂರು ಠಾಣೆಗೆ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣಾ ಪಿಐ ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ.
ಅವಲಹಳ್ಳಿ ಠಾಣೆಗೆ ಕೆ ಆರ್ ಪುರಂ ಠಾಣೆಯ ಇನ್ಸ್ಪೆಕ್ಟರ್ ರಾಮಮೂರ್ತಿ ಹಾಗೂ ಕೊತ್ತನೂರು ಠಾಣೆಗೆ ಸಂಪಿಗೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.