-->
ಬೈಂದೂರು ಬಸ್ ನಿಲ್ದಾಣದಿಂದ ಸ್ಥಳೀಯ ಜನತೆಗೆ ಅನುಕೂಲ:ರಾಮಲಿಂಗಾ ರೆಡ್ಡಿ(video)

ಬೈಂದೂರು ಬಸ್ ನಿಲ್ದಾಣದಿಂದ ಸ್ಥಳೀಯ ಜನತೆಗೆ ಅನುಕೂಲ:ರಾಮಲಿಂಗಾ ರೆಡ್ಡಿ(video)


ಬೈಂದೂರು ಬಸ್ ನಿಲ್ದಾಣ ಆಧುನಿಕ ಸ್ಪರ್ಶದೊಂದಿಗೆ ಚೆನ್ನಾಗಿ ನಿರ್ಮಾಣವಾಗಿದೆ. ಬಸ್ ನಿಲ್ದಾಣ ಕಾಮಗಾರಿಯು ಬೇರೆ ಬೇರೆ ಕಾರಣಗಳಿಂದ ನಿಧಾನಗತಿಯಲ್ಲಿದ್ದರೂ ಕಾಮಗಾರಿ ಪೂರ್ಣಗೊಂಡಿದ್ದು ಈ ಬಸ್ ನಿಲ್ದಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗಳ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. 


ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಮಂಗಳೂರು ವಿಭಾಗ ಇದರ  ಬೈಂದೂರು ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. 

ಉಡುಪಿ-ಮಂಗಳೂರು ಭಾಗವು ಅತಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಂಗಳೂರು ವಿಭಾಗವು ಆಡಳಿತ ಕೇಂದ್ರವಾಗಿರುವುದರಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉಡುಪಿ ಮತ್ತು ಮಂಗಳೂರಿಗೆ ಹೆಚ್ಚುವರಿ ಬಸ್ ಗಳನ್ನು ಆದ್ಯತೆ ಮೇಲೆ ನೀಡಲಾಗುವುದು.  ಸುಮಾರು 900 ನೂತನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಖರೀದಿಸುವ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ 70% ಪೂರ್ಣಗೊಂಡಿದ್ದು, ಅದರಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವಳಿ ಜಿಲ್ಲೆಗಳಿಗೆ ಹೆಚ್ಚಿನ ಬಸ್ ನೀಡಲಾಗುವುದು, ಅಲ್ಲದೇ ಆಡಳಿತ ಕೇಂದ್ರವಾಗಿರುವ ಮಂಗಳೂರು ನಗರಕ್ಕೆ ಸುಮಾರು 100 ಎಲೆಕ್ಟ್ರಿಕ್ ಬಸ್ ಕಲ್ಪಿಸಲಾಗುವುದು ಎಂದ ಅವರು ಬೈಂದೂರು ಹಾಗೂ ಕುಂದಾಪುರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಾಧಿಕಾರ ರಚಿಸಬೇಕೆಂಬ ಬೇಡಿಕೆಯಿದೆ. ಆದರೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿ ಕೇವಲ ಒಂದು ವರ್ಷ ಕಳೆದಿದೆ ಅಷ್ಟೇ. ಈಗಿರುವ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ  ಮುಗಿದ ಬಳಿಕ ನೂತನ ಪ್ರಾಧಿಕಾರ ರಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೈಂದೂರು ನೂತನ ಬಸ್ ನಿಲ್ದಾಣಕ್ಕೆ ಮೂಕಾಂಬಿಕಾ ಬಸ್ ನಿಲ್ದಾಣವಾಗಿ ನಾಮಕರಣ ಮಾಡಲು ಪ್ರಕ್ರಿಯೆ ಮೂಲಕ ಅಂತಿಮಗೊಳಿಸುತ್ತೇನೆ ಹಾಗೂ ಈಗಿರುವ ಸದಸ್ಯರ ಅವಧಿ ಮುಗಿದ ಬಳಿಕ ಕೊಲ್ಲೂರು ಪ್ರಾಧಿಕಾರ ರಚನೆ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದರು.

ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರು ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದೆ. ಎಲ್ಲರ ಸಹಕಾರದಿಂದ ಬಸ್ ನಿಲ್ದಾಣ ಕಾಮಗಾರಿಯು ಪೂರ್ಣಗೊಂಡಿದ್ದು ಜನರ ಕನಸು ನನಸಾಗಿದೆ. 2 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಇನ್ನೂ 8 ಎಕರೆ ಜಾಗ ಉಳಿದಿದೆ. ಈ ಜಾಗದಲ್ಲಿ ಬಸ್ ಡಿಪೋ ಮಾಡಿದಲ್ಲಿ ಅನುಕೂಲವಾಗಲಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಕೆಲಸ, ಆಸ್ಪತ್ರೆ ಮತ್ತು ಶಾಲಾ-ಕಾಲೇಜುಗಳಿಗೆ ತೆರಳಲು ಬಸ್ ಗಳ ಅಗತ್ಯವಿದೆ. ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗ ಸೇರಿದಂತೆ 35ಕ್ಕೂ ಅಧಿಕ ಕಡೆ ಬಸ್ ಸಂಚಾರ ಆರಂಭಿಸಬೇಕಿದೆ. ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ನೀಡಿದಲ್ಲಿ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನ ದೊರೆಯಲಿದೆ ಎಂದರು. 

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಬಹುದಿನಗಳ ಬೇಡಿಕೆಯಾದ ಬೈಂದೂರು ಬಸ್ ನಿಲ್ದಾಣ ಉದ್ಘಾಟನೆಗೆ ಇಲ್ಲಿನ ಮಾಧ್ಯಮ ಮತ್ತು ಸಾರ್ವಜನಿಕರ ಕಾಳಜಿ ಕಾರಣವಾಗಿದೆ.ರಾಜಕೀಯ ಮೆರೆತು ಅಭಿವೃದ್ದಿ ವಿಚಾರದಲ್ಲಿ ಒಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಸುರಕ್ಷಾ ಚಾಲಕರಿಗೆ  ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಗುತ್ತಿಗೆದಾರ ಪ್ರಭಾಕರ ಶೆಟ್ಟಿ ನೆಲ್ಯಾಡಿ ಹಾಗೂ ಶ್ರೀಧರ ಆಚಾರ್ಯ ರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೈಂದೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ , ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಗಿರೀಶ್ ಬೈಂದೂರು, ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಜಿ.ಪಂ ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಸುರೇಶ್ ಬಟವಾಡಿ, ಮದನ್ ಕುಮಾರ್ ಉಪ್ಪುಂದ, ಕುಂದಾಪುರ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳವಳ್ಳಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪ್ರಿಯ ಪವನ್ ಕುಮಾರ್ ಸ್ವಾಗತಿಸಿ, ವಿಭಾಗೀಯ ಸಂಚಾರ ಅಧಿಕಾರಿ ಹೆಚ್.ಆರ್.ಕಮಲ್ ಕುಮಾರ್ ವಂದಿಸಿದರು. ಸುಬ್ರಹ್ಮಣ್ಯಂ ನಿರೂಪಿಸಿದರು.




Ads on article

Advertise in articles 1

advertising articles 2

Advertise under the article