ಗೋಮಾಂಸ ಸಾಗಾಟಗಾರನ ಮೇಲೆ ಹಲ್ಲೆ ಪ್ರಕರಣ; ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್
ಮಂಗಳೂರಿನ ಬಜ್ಪೆ ಬಳಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಡಪದವಿನ ಸುಮಿತ್ ಭಂಡಾರಿ(21), ರಜತ್ ನಾಯ್ಕ್(30) ಹಲ್ಲೆ ನಡೆಸಿದ್ದು, ಇದೀಗ ಫೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ. ಮೂಲರಪಟ್ಣ ನಿವಾಸಿ ಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳೊಂದಿಗೆ ಬೈಕ್‌ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ. ಇದನ್ನು ಗಮನಿಸಿದ ಸುಮಿತ್ ಹಾಗೂ ರಜತ್ ಟಾಟಾ ಸುಮೋ ವಾಹನದಲ್ಲಿ ಬೈಕನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾಲಕಿ ಹೇಳಿಕೆ ನೀಡಿದ್ದು, ತಂದೆ ಹಾಗೂ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದರ ಆಧಾರದ ಮೇಲೆ ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್ ವಿರುದ್ಧ ಪೊಕ್ಸೊ ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳ), ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 126 (2) (ತಡೆದು ನಿಲ್ಲಿಸಿದ್ದು), ಸೆಕ್ಷನ್ 115 (2) (ಹಲ್ಲೆ ನಡೆಸಿದ್ದು), ಸೆಕ್ಷನ್ 74 (ಬಾಲಕಿ ಮೇಲೆ ಹಲ್ಲೆ, ಮಾನಭಂಗ ಯತ್ನ), ಸೆಕ್ಷನ್ 75 (1) (ಲೈಂಗಿಕ ಕಿರುಕುಳ), ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ) ಹಾಗೂ ಸೆಕ್ಷನ್ 352 (ಶಾಂತಿ ಭಂಗ) ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಇನ್ನು ಅಬ್ದುಲ್ ಸತ್ತಾರ್ ಬೈಕ್‌ನಲ್ಲಿ 35 ಪೊಟ್ಟಣಗಳಲ್ಲಿ ತುಂಬಿದ್ದ 19 ಕೆಜಿ ಗೋಮಾಂಸ ಸಾಗಾಟ ಮಾಡುತ್ತಿದ್ದ. ಇದಕ್ಕೆ ಯಾವುದೇ ಬಿಲ್, ದಾಲೆಗಳು ಇರಲಿಲ್ಲ. ಪ್ರಕರಣಕ್ಕೆ ಸಂಬOಧಿಸಿ ಅಬ್ದುಲ್ ಸತ್ತಾರ್‌ನನ್ನು ಕೂಡಾ ಬಂಧಿಸಲಾಗಿದೆ. ಹಲ್ಲೆಗೈದ ಆರೋಪಿಗಳಾದ ಸುಮಿತ್ ಹಾಗೂ ರಜತ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.