ಮಲ್ಪೆ ಮೀನು ಕಾರ್ಮಿಕನ ಹತ್ಯೆ ಪ್ರಕರಣ: ಆರೋಪಿಗೆ 4 ವರ್ಷ ಜೈಲು
Tuesday, January 27, 2026
ಉಡುಪಿ ಜಿಲ್ಲೆಯ ಮಲ್ಪೆ ಬಾಪುತೋಟ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಮೀನು ಕಾರ್ಮಿಕ ಮಹಾಂತೇಶ್ (35) ಹತ್ಯೆ ಪ್ರಕರಣಕ್ಕೆ ಸಂಬOಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ ಅಂಬಿಗ (30) ಶಿಕ್ಷೆಗೆ ಗುರಿಯಾಗಿದ್ದಾರೆ. 2022ರ ಏಪ್ರಿಲ್ 13ರಂದು ಬೋಟಿನ ಕ್ಯಾಬಿನ್‌ನಲ್ಲಿ ಲೈಟ್ ಆಫ್ ಮಾಡುವ ವಿಚಾರವಾಗಿ ಮಾತಿನ ಚಕಮಕಿ ನಡೆದು, ಸಿಟ್ಟಿನಿಂದ ನಾಗರಾಜ್ ಕಬ್ಬಿಣದ ರಾಡ್‌ನಿಂದ ಮಹಾಂತೇಶ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಮಹಾಂತೇಶ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಏ.14ರಂದು ಮೃತಪಟ್ಟಿದ್ದರು.
ವಿಚಾರಣೆ ಬಳಿಕ ನ್ಯಾಯಾಲಯವು ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆ ಹಾಗೂ 65,000 ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸಬೇಕಾಗಿದೆ. ತಡೆಯಲು ಬಂದ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಆರು ತಿಂಗಳ ಜೈಲು ಹಾಗೂ 10,000 ರೂಪಾಯಿ ದಂಡ ವಿಧಿಸಲಾಗಿದೆ. ಮೃತರ ಪತ್ನಿಗೆ 75,000 ರೂಪಾಯಿ ಪರಿಹಾರ ನೀಡಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ. ಸರಕಾರದ ಪರವಾಗಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.