ಕಾಪು ಮಾರಿಯಮ್ಮ ದೇವಸ್ಥಾನದಲ್ಲಿ ಗಾಯಕ ವಿಜಯ ಪ್ರಕಾಶ್ ವಿಶೇಷ ಅನ್ನದಾನ ಸೇವೆ
Sunday, January 04, 2026
ಉಡುಪಿ ಜಿಲ್ಲೆಯ ಕಾಪುವಿನ ಶ್ರೀ ಹೊಸ ಮಾರಿಗುಡಿಗೆ ಖ್ಯಾತ ಭಾರತೀಯ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಭೇಟಿ ನೀಡಿ, ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು.
ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.
ಪೂಜಾ ಸಂದರ್ಭದಲ್ಲಿ ಕರ್ನಾಟಕದ ಬೃಹತ್ ಘಂಟೆಯನ್ನು ಬಾರಿಸಿದ ವಿಜಯ ಪ್ರಕಾಶ್, ನಿತ್ಯ ಅನ್ನದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನದ ವಿಶೇಷ ಅನ್ನದಾನ ಸೇವೆಯನ್ನು ಸಮರ್ಪಿಸಿದರು. ಇದೇ ವೇಳೆ ನವದುರ್ಗಾ ಲೇಖನ ಮಂಟಪದ ಲೇಖನ ಯಜ್ಞದ ಪುಣ್ಯ ಭೂಮಿಯಲ್ಲಿ ಮೊದಲ ದಿನದ ಲೇಖನವನ್ನು ಬರೆದು, ಉಳಿದ ಲೇಖನವನ್ನು 9 ದಿನಗಳವರೆಗೆ ಮನೆಯಲ್ಲಿಯೇ ಬರೆಯುವ ಮೂಲಕ ಶಾಶ್ವತ ಸೇವೆ ಸಮರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ವತಿಯಿಂದ ವಿಜಯ ಪ್ರಕಾಶ್ ಅವರನ್ನು ಗೌರವಿಸಲಾಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾದವ ಆರ್. ಪಾಲನ್, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಜಯರಾಮ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಸಾವಿತ್ರಿ ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.