ಮಲ್ಪೆ "ಮಾಲ್ದಿ ದ್ವೀಪ"ದಲ್ಲಿ ವರ್ಷಕ್ಕೊಮ್ಮೆ ನಡೆಯೋ ವಿಶಿಷ್ಟ ಆಚರಣೆ..!
Wednesday, January 14, 2026
ಪ್ರಕೃತಿ ಸೌಂದರ್ಯವನ್ನೆಲ್ಲಾ ತನ್ನೊಡಲಲ್ಲಿ ಇಟ್ಟುಕೊಂಡಿರುವ ಊರು ಉಡುಪಿಯ ಮಲ್ಪೆ ಕಡಲ ತೀರ. ಈ ತೀರದ 6 ಕಿಲೋ ಮೀಟರ್ ದೂರ ಕಡಲಿನಲ್ಲಿ ಸಾಗಿದರೆ ಅಲ್ಲೊಂದು ಮಾಲ್ದೀ ದ್ವೀಪವಿದೆ. ಇಲ್ಲಿ ಸಂಕ್ರಮಣದ ಪರ್ವಕಾಲದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸುವ ಸಂಪ್ರದಾಯವೊಂದಿದೆ.
ಮಲ್ಪೆ ಸಮೀಪದ ಕೊಡವೂರು ಶಂಕರನಾರಾಯಣ ದೇವಸ್ಥಾನಕ್ಕೂ ಮಾಲ್ದಿ ದ್ವೀಪದಲ್ಲಿ ನೆಲೆನಿಂತಿರುವ ಶ್ರೀ ಆದಿ ಪರಾಶಕ್ತಿ ಸನ್ನಿಧಾನದಕ್ಕೂ ದೈವಿಕ ಸಂಬಂಧವಿದೆ ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ 13 ವರ್ಷಗಳ ಹಿಂದೆ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಇಟ್ಟ ಅಷ್ಟ ಮಂಗಲ ಪ್ರಶ್ನೆ ಸಂದರ್ಭ ನೀಡಿರುವ ಸೂಚನೆಯಂತೆ ಸಂಕ್ರಮಣ ಸಂದರ್ಭ ಮಾಲ್ದಿ ದ್ವೀಪದ ಆದಿಪರಾಶಕ್ತಿಗೂ ವಿಶೇಷ ಪೂಜೆ ಸಲ್ಲುತ್ತದೆ.
ಮಾಲ್ದಿ ದ್ವೀಪಕ್ಕೆ ಪ್ರವಾಸಿಗರಿಗೆ ಅಥವಾ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ. ಈ ದಾರಿ ಅಷ್ಟು ಸುಗಮವೂ ಆಗಿಲ್ಲ. ಸಂಕ್ರಾಂತಿಯ ಒಂದು ದಿನವಷ್ಟೇ ಇಲ್ಲಿಗೆ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ನೆಲೆ ನಿಂತ ಆದಿ ಪರಾಶಕ್ತಿಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಪೂಜೆ ಸಲ್ಲುತ್ತದೆ. ಸಂಕ್ರಾಂತಿ ದಿನ ಬೋಟ್ ಮೂಲಕ ಅರ್ಚಕರು ಹಾಗೂ ಊರವರು ಸೇರಿ ಪೂಜಾ ಸಾಮಾಗ್ರಿಗಳ ಜೊತೆಗೆ ಮಾಲ್ದಿ ದ್ವೀಪಕ್ಕೆ ತೆರಳುತ್ತಾರೆ.
ಮಲ್ಪೆಯಿಂದ 6 ಕಿಲೋ ಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಯಲ್ಲಿ ನೂರಾರು ಭಕ್ತರು ಭಾಗಿಯಾಗುತ್ತಾರೆ. ಸುಖ ಶಾಂತಿ ನೆಮ್ಮದಿಗಾಗಿ ಅರ್ಚಿಸಿ ಪೂಜಿಸಲಾಗುತ್ತದೆ. ಒಟ್ಟಿನಲ್ಲಿ ಮಲ್ಪೆ ಕಡಲ ತಡಿಯಲ್ಲಿರುವ ಮಾಲ್ದಿದ್ವೀಪದಲ್ಲಿ ಪ್ರಕೃತಿಯ ಸೌಂದರ್ಯದ ಜೊತೆಗೆ ಧಾರ್ಮಿಕ ನಂಬಿಕೆಯೊOದು ಬೆಸೆದುಕೊಂಡಿದೆ.


