ಪಾಳುಬಿದ್ದ ಬಸ್ ನಿಲ್ದಾಣಕ್ಕೆ ಕಲಾವಿದನಿಂದ ವರ್ಲಿ ಚಿತ್ತಾರದ ಹೊಸ ರೂಪ...!
Tuesday, January 13, 2026
ಉಡುಪಿಯ ಅಪರೂಪದ ಚಿತ್ರ ಕಲಾವಿದ ಮಹೇಶ್ ಮರ್ಣೆ ಅವರು ತನ್ನ ಮಗಳ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ರಂಗಿನ ಚಿತ್ತಾರ ಬಿಡಿಸಿ ಹೊಸ ರೂಪ ನೀಡಿದ್ದಾರೆ.
ಉಡುಪಿಯ ಮಹೇಶ ಮರ್ಣೆ ಅವರು ಅಪರೂಪದ ಕಲಾವಿದರಾಗಿದ್ದು, ಇವರು ಅಶ್ವತ್ಥದ ಎಲೆಯಲ್ಲಿ ನಾನಾ ವ್ಯಕ್ತಿಗಳು, ದೇವರ ಮುಖ ಮೂಡಿಸುವುದರಲ್ಲಿ ನಿಷ್ಣಾತರು. ಅಶ್ವತ್ಥದ ಎಲೆಯನ್ನು ಬಳಸಿ ಇವರು ಮೂಡಿಸಿದ ಚಿತ್ರಗಳು ಈಗಾಗಲೇ ಪ್ರಸಿದ್ಧಿ ಪಡೆದಿವೆ. ಹಬ್ಬ ಹರಿದಿನಗಳು ಬಂದಾಗ ಇವರು ರಚಿಸುವ ಕಲಾಕೃತಿಗಳು ಜನ ಮೆಚ್ಚುಗೆ ಪಡೆದಿವೆ.
ಇದೀಗ ತನ್ನ ಮಗಳು ಅನಘ ಎಂ. ಮರ್ಣೆ ಇವಳ 6 ನೇ ಹುಟ್ಟು ಹಬ್ಬದ ಪ್ರಯುಕ್ತ ಪೆರ್ಣಂಕಿಲದ ಮನೆ ಸಮೀಪದ ಪಾಳು ಬಿದ್ದ ಬಸ್ ನಿಲ್ದಾಣವನ್ನು ಸಿಂಗರಿಸಿದ್ದಾರೆ. 3 ದಿನಗಳ ಪರಿಶ್ರಮದಿಂದ ತನ್ನ ಇಬ್ಬರು ವಿದ್ಯಾರ್ಥಿಗಳಾದ ಶ್ರೇಯಸ್ ಹಾಗೂ ಸಂಜನಾ ಅವರೊಂದಿಗೆ ಸೇರಿ ವರ್ಲಿ ಚಿತ್ತಾರ ಬಿಡಿಸಿದ್ದಾರೆ.
ವರ್ಲಿ ಚಿತ್ರಗಳ ಮೂಲಕ ತುಳುನಾಡಿನ ಆಚರಣೆಗಳಾದ ಭೂತಾರಾಧನೆ, ಹುಲಿವೇಷ, ನಾಗಮಂಡಲ, ಕಂಬಳ, ರಥೋತ್ಸವ, ಉಳುವ ಯೋಗಿ, ಯಕ್ಷಗಾನ, ಮೀನುಗಾರಿಕೆ ಜೊತೆ ಹಿಂದೂ ಮುಸ್ಲಿಂ ಕ್ರೈಸ್ತರ ಭಾವೈಕ್ಯವನ್ನು ಸಾರುವ ಚಿತ್ರಗಳನ್ನು ಬಸ್ ತಂಗುದಾಣದಲ್ಲಿ ಬಿಡಿಸಲಾಗಿದೆ. ಈ ಚಿತ್ತಾರಗಳು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರ ಕಣ್ಮನ ಸೆಳೆಯಲಿವೆ.
ಬಣ್ಣ ಮಾಸಿ ಶಿಥಿಲಾವಸ್ಥೆಯಲ್ಲಿದ್ದ ಪೆರ್ಣಂಕಿಲದ ಬಸ್ ನಿಲ್ದಾಣ ಮೂರು ದಿನದಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊOಡಿದೆ. ತನ್ನ ಕಲೆಯ ಪ್ರದರ್ಶನದ ಜೊತೆಗೆ ಬಸ್ ನಿಲ್ದಾಣಕ್ಕೊಂದು ಹೊಸ ಮೆರುಗು ನೀಡಿದ ಕಲಾವಿದನ ಕೈಚಳಕಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

