ಮಣಿಪಾಲ ವಿ.ಪಿ ನಗರದಲ್ಲಿ ದೃಷ್ಟಿ ಯೋಜನೆ ಉದ್ಘಾಟನೆ
Saturday, January 10, 2026
ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಂಬೋಸ್ಟಾರ್ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಸಹಯೋಗದಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯ ವಿಪಿ ವಾರ್ಡ್ ನ ಬೀಟ್ ನಂಬರ್ 4ರಲ್ಲಿ ದೃಷ್ಟಿ ಯೋಜನೆಯನ್ನು ಆರಂಭಿಸಲಾಯಿತು.
ಮಣಿಪಾಲದ ವಿ.ಪಿ.ನಗರದಲ್ಲಿರುವ 86 ಮನೆಗಳನ್ನು ಕೇಂದ್ರೀಕರಿಸಿ ಕೊಂಡು ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್ ಏಜೆನ್ಸಿಯಿಂದ ಒಬ್ಬ ಸಂಪೂರ್ಣ ತರಬೇತಿ ಪಡೆದ ಗಾರ್ಡನ್ನು ನೇಮಕ ಮಾಡಿ, ಇಲ್ಲಿ ಕಳ್ಳತನ ಸೇರಿದಂತೆ ಯಾವುದೇ ಅಪರಾಧ ನಡೆಯದಂತೆ ತಡೆಯಲಾಗುತ್ತದೆ. ಇದು ಜಿಲ್ಲೆಯ 12ನೆ ದೃಷ್ಠಿ ಯೋಜನೆಯಾಗಿದೆ.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಧಾಕರ್ ನಾಯ್ಕ್ ದೃಷ್ಟಿ ಯೋಜನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಂದು ಕಡೆ ಒಮ್ಮೆ ಕಳ್ಳತನ ನಡೆದರೆ ಕಳ್ಳರನ್ನು ಪತ್ತೆ ಮಾಡುವುದು ಅಷ್ಟು ಸುಲಭ ಅಲ್ಲ. ಯಾಕೆಂದರೆ ಕಳ್ಳರು ಅಲ್ಲೇ ಇರಲ್ಲ. ದೂರ ಹೋಗಿರುವುದರಿಂದ ಅವರನ್ನು ಹುಡುಕಲು ತುಂಬಾ ಸಮಯ ಬೇಕಾಗುತ್ತದೆ. ಅಲ್ಲದೆ ಮನೆಯವರು ಕೂಡ ಆರ್ಥಿಕ ನಷ್ಟ ಅನುಭವಿಸುತ್ತಾರೆ. ಆದುದರಿಂದ ನಾವು ಬಹಳ ಎಚ್ಚರಿಕೆಯಿಂದ ಇದ್ದು, ಕಳ್ಳತನ ನಡೆಯದಂತೆ ತಡೆಯಬೇಕಾಗಿದೆ. ಇದಕ್ಕೆ ಈ ದೃಷ್ಠಿ ಯೋಜನೆ ತುಂಬಾ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ದೃಷ್ಠಿ ಯೋಜನೆಯ ಅಧ್ಯಕ್ಷ ಸುರೇಶ್ ಕುಮಾರ್, ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟೀ ಸರ್ವಿಸಸ್‌ನ ಎಚ್‌ಆರ್ ಕಾವ್ಯ ಇದ್ದರು. ಮಣಿಪಾಲ ಠಾಣಾ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೊಲೀಸ್ ಉಪನಿರೀಕ್ಷಕ ಅನಿಲ್ ವಂದಿಸಿದರು. ಸಿಬ್ಬಂದಿ ಚೇತನ್ ಕಾರ್ಯಕ್ರಮ ನಿರೂಪಿಸಿದರು.



