ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತಾಮ್ರದ ಹೊದಿಕೆ ಕಳವು ಪ್ರಕರಣ:ಇಬ್ಬರ ಬಂಧನ
ಕಾರ್ಕಳ ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಕಳವಾರು ನಿವಾಸಿ ಆರೀಫ್ @ ಮುನ್ನ (37) ಹಾಗೂ ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 2.18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜ. 3ರಂದು ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮುಖ್ಯ ಬಾಗಿಲನ್ನು ಸಾಧನದ ಸಹಾಯದಿಂದ ಬಲವಂತವಾಗಿ ತೆರೆದು ಒಳಪ್ರವೇಶಿಸಿದ ದುಷ್ಕರ್ಮಿಗಳು, ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ಕಲಂ 331(3), 331(4) ಹಾಗೂ 305ರಡಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಅವರ ನಿರ್ದೇಶನದಂತೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿಯ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಬಂಧಿತ ಆರೀಫ್ @ ಮುನ್ನ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ, ಕಾರ್ಕಳ ಗ್ರಾಮಾಂತರ ಹಾಗೂ ಮೂಲ್ಕಿ–ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಬ್ದುಲ್ ಹಮೀದ್ ವಿರುದ್ಧ ಬಂಟ್ವಾಳ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಬಂಧಿತರಿಂದ 51 ಕೆ.ಜಿ ತೂಕದ ತಾಮ್ರದ ಹೊದಿಕೆ (ಅಂದಾಜು ಮೌಲ್ಯ ₹45,000), ಎರಡು ಸೀಲಿಂಗ್ ಫ್ಯಾನ್‌ಗಳು (₹1,200), ಕೃತ್ಯಕ್ಕೆ ಬಳಸಿದ್ದ KA-35-A-3870 ಸಂಖ್ಯೆಯ ಏಪ್ ಗೂಡ್ಸ್ ಆಟೋ ರಿಕ್ಷಾ (ಅಂದಾಜು ಮೌಲ್ಯ ₹1,00,000) ಹಾಗೂ KA-19-HV-9410 ಸಂಖ್ಯೆಯ ಹೀರೋ ಕಂಪನಿಯ ಮೋಟಾರ್ ಸೈಕಲ್ (ಅಂದಾಜು ಮೌಲ್ಯ ₹70,000) ಸೇರಿ ಒಟ್ಟು ₹2,18,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಕಾರ್ಕಳ ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಪಿಎಸ್ಐಗಳಾದ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್., ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನಕುಮಾರ್ ಎಂ.ಎಸ್., ಪಿಎಸ್ಐ ಸುಂದರ ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ಆರ್ಡಿಸೆಲ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
