ಮಾರಣಕಟ್ಟೆ ಒಡೆಯನ ಮುಡಿಗೇರಲು ಸಜ್ಜಾದ "ಹೆಮ್ಮಾಡಿ ಶ್ಯಾವಂತಿ"
Monday, January 12, 2026
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದೊಡೆಯ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಜಾತ್ರಾ ಸಂಭ್ರಮಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಜಾತ್ರೆಗೆಂದೇ ಹೆಮ್ಮಾಡಿಯ ಎಕರೆಗಟ್ಟಲೆ ಗದ್ದೆಗಳಲ್ಲಿ ಘಮಘಮಿಸುವ ಸೇವಂತಿಗೆ ಅರಳಿ ನಿಂತಿವೆ. ಕರಾವಳಿಯ ಬೇರೆ ಕಡೆಗಳಲ್ಲಿ ಎಲ್ಲಿಯೂ ಕಾಣ ಸಿಗದ ಸೇವಂತಿಗೆ ಕುಂದಾಪುರದ ಹೆಮ್ಮಾಡಿ ಭಾಗದ 25ಕ್ಕೂ ಅಧಿಕ ಎಕರೆ ಗಟ್ಟಲೆ ಜಾಗದಲ್ಲಿ ಅರಳಿ ಕಣ್ಮನ ಸೆಳೆಯುತ್ತಿದೆ.
ಜ.14ರ ಸಂಕ್ರಾತಿಯ ದಿನ ಕುಂದಾಪುರ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಹೂವು ಸಮರ್ಪಿಸುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಹಳದಿ ಬಣ್ಣದ ಕಣ್ಮನ ಸೆಳೆಯುವ ಸುವಾಸನೆಯ ಸೇವಂತಿಗೆ ಬ್ರಹ್ಮಲಿಂಗೇಶ್ವನ ಜಾತ್ರೆಯಲ್ಲಿ ಅಗ್ರಗಣ್ಯ. ತಲೆ ಮೇಲೆ ಹಣ್ಣು ಕಾಯಿ ಹಾಗೂ ಹರಕೆ ಹೊತ್ತು ಸಾಗುವ ಭಕ್ತರ ಬುಟ್ಟಿಯಲ್ಲಿ ಸೇವಂತಿಗೆಗೆ ವಿಶೇಷ ಸ್ಥಾನವಿದೆ. ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾದ ಹೂ ಎನ್ನಲಾಗುವ ಸೇವಂತಿಗೆ ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರಿಂದ ಹರಕೆಯಾಗಿ ಸಮರ್ಪಣೆ ಆಗುತ್ತದೆ. ಮಾರಣಕಟ್ಟೆ ಜಾತ್ರೆಗೆಂದೇ ಪ್ರತಿ ವರ್ಷ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಸೇವಂತಿಗೆ ಬೆಳೆಯುತ್ತಾರೆ. ಸಂಕ್ರಾತಿ ದಿನ ಸೂಜಿ ಹಾಗೂ ಬಾಳೆ ಬಳ್ಳಿಯ ದಾರದಲ್ಲಿ ಪೋಣಿಸಿ ಹೂಮಾಲೆ ಮಾಡಿ ಬ್ರಹ್ಮಲಿಂಗೇಶ್ವರನ ಸನ್ನಿಧಾನಕ್ಕೆ ಅರ್ಪಿಸಲಾಗುತ್ತದೆ.
ಆಗಸ್ಟ್ ತಿಂಗಳಿನಲ್ಲಿ ಭತ್ತದ ಕಟಾವು ಮುಗಿದ ಬಳಿಕ ಈ ಭಾಗದ ಕೃಷಿಕರು ಸೇವಂತಿಗೆ ಕೃಷಿಗಾಗಿ ಗದ್ದೆಯನ್ನು ಹದಗೊಳಿಸುತ್ತಾರೆ. ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ, ಕಟ್ಟು, ಭಟ್ರ ಬೆಟ್ಟು, ಹೊಸ್ಕಳಿ, ಹರೆಗೋಡು, ಸುಳ್ಸೆ, ಗುಡ್ಡೆಮನೆ, ದೇವಸ್ಥಾನ ಬೆಟ್ಟು ಸೇರಿದಂತೆ ಹಲವು ಗ್ರಾಮಗಳ ಕೃಷಿಕರು ಸೇವಂತಿಕೆ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಮೂರು ತಿಂಗಳ ಪೋಷಣೆಯ ನಂತರ ಜನವರಿ ಎರಡನೇ ವಾರದಲ್ಲಿ ಹೂ ಕಟಾವು ಆರಂಭವಾಗುತ್ತದೆ. ಸಂಕ್ರಾOತಿ ಹಬ್ಬದ ಮೊದಲ ದಿನ ಮೊದಲ ಹೂ ಕೊಯ್ಲನ್ನು ಬುಟ್ಟಿಯಲ್ಲಿ ತುಂಬಿಕೊOಡು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ
ಉಳಿದ ಹೂವನ್ನು ಮಾರಾಟ ಮಾಡುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ. ಮಾರಣಕಟ್ಟೆ ಜಾತ್ರೆಯ ಬಳಿಕ ಹೆಮ್ಮಾಡಿ ಸೇವಂತಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಕೆಂಡ ಮಹೋತ್ಸವ, ಕೋಲ ಮಾದರಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ರವಾನೆಯಾಗುತ್ತದೆ.
ಹೆಮ್ಮಾಡಿ ಶ್ಯಾಮಂತಿ ಎಂದೇ ಪ್ರಸಿದ್ಧಿ ಪಡೆದ ಹಳದಿ ಬಣ್ಣದ ಪುಟ್ಟ ಪುಟ್ಟ ಸೇವಂತಿಗೆ ಪರಿಮಳದಲ್ಲೂ ಮೇಲುಗೈ. ಮಕರ ಸಂಕ್ರಮಣಕ್ಕೆ ದಿನಗಳಷ್ಟೇ ಬಾಕಿ ಇರುವಾಗ ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಿಸಲಾಗುತ್ತದೆ.
ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಬಹುಬೇಡಿಕೆ ಇರುವ ಸೇವಂತಿಗೆ ಹೂವಿನ ಬೆಳೆ ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸೇವಂತಿಗೆ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಕೆಲ ಕೃಷಿಕರು ಸೇವಂತಿಗೆ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಸೇವಂತಿಗೆ ಬೆಳೆಗೂ ಸರ್ಕಾರದಿಂದ ಸಿಗಬೇಕಾದ ಪ್ರೋತ್ಸಾಹ, ಬೆಂಬಲ ಸಿಗುತ್ತಿಲ್ಲ ಎನ್ನುವುದು ಈ ಭಾಗದ ಸೇವಂತಿಗೆ ಕೃಷಿಕರ ಅಳಲು.
ಸಾಕಷ್ಟು ಸವಾಲುಗಳ ನಡುವೆಯೂ ಹೆಮ್ಮಾಡಿ ಭಾಗದ ಕೃಷಿಕರು ಸೇವಂತಿ ಬೆಳೆಯನ್ನು ಬೆಳೆಯುತ್ತಾ ಬಂದಿದ್ದಾರೆ. ಸರ್ಕಾರ ಮಟ್ಟದ ಸವಲತ್ತುಗಳು ಸರಿಯಾಗಿ ಸಿಗದೇ ಇದ್ದರೂ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವೆನಿಸಿ ಸೇವಂತಿಗೆಯನ್ನು ಬೆಳೆಯುತ್ತಿದ್ದಾರೆ. ಇದು ಕೇವಲ ಕೃಷಿಯಲ್ಲ.. ನಮ್ಮೊಳಗಿನ ಭಕ್ತಿ ಭಾವದ ಸಂಕೇತ ಎನ್ನುತ್ತಾರೆ ಸೇವಂತಿಗೆ ಕೃಷಿಕರು. ಸಂಪ್ರದಾಯ ಧಾರ್ಮಿಕ ಚೌಕಟ್ಟಿನೊಳಗೆ ಸೇವಂತಿಗೆ ಕೃಷಿ ಮಾಡುತ್ತಿರುವ ಕೃಷಿಕರಿಗೂ ಸರ್ಕಾರ ಮಟ್ಟದ ಪ್ರೋತ್ಸಾಹದ ಅವಶ್ಯಕತೆ ಇದೆ.



