ಶೀರೂರು ಪರ್ಯಾಯಕ್ಕೆ ಅದಮ್ಯ ಚೇತನ ಸಂಸ್ಥೆಯ ಸ್ಟೀಲ್ ತಟ್ಟೆಗಳು
ಈ ಬಾರಿ ಉಡುಪಿಯ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ವಹಿಸಿಕೊಳ್ಳುವ ಶೀರೂರು ಪರ್ಯಾಯಕ್ಕೆ ದೂರದೂರಿನಿಂದ ಕೊಡುಗೆಗಳು ಹರಿದು ಬರುತ್ತಿದೆ. ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯಿOದ 12 ಸಾವಿರ ಸ್ಟೀಲ್ ತಟ್ಟೆಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಕೇಂದ್ರ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರು ತಮ್ಮ ತಾಯಿ ಗಿರಿಜಾ ಶಾಸ್ತಿç ಸ್ಮರಣಾರ್ಥ ಸ್ಥಾಪಿಸಿರುವ ಅದಮ್ಯ ಚೇತನ ಸಂಸ್ಥೆಯನ್ನು ಇದೀಗ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ.
ಅನಂತ ಪ್ಲೇಟ್ ಬ್ಯಾಂಕ್ ಯೋಜನೆಯ ಮೂಲಕ ಬಳಸಿ ಎಸೆಯುವ ತಟ್ಟೆಗಳ ಬದಲು ಮರುಬಳಕೆಯ ತಟ್ಟೆಗಳನ್ನು ಒದಗಿಸಲಾಗುತ್ತದೆ. ಇದರಿಂದ ಲೋಡ್‌ಗಳಷ್ಟು ಕಸ ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಅದಮ್ಯ ಚೇತನ ಸಂಸ್ಥೆಯು ಉಡುಪಿ ಕೃಷ್ಣಮಠಕ್ಕೆ ಅನ್ನದ ಬಟ್ಟಲನ್ನು ಕೊಡುಗೆಯಾಗಿ ನೀಡಲಿದೆ. ಈ ವಿಷಯವನ್ನು ಖುದ್ದಾಗಿ ಸಂಸ್ಥೆಯ ಮೇಲ್ವಿಚಾರಕಿ ತೇಜಸ್ವಿನಿ ಅನಂತ್ ಕುಮಾರ್ ತಿಳಿಸಿದ್ದಾರೆ.
ಅದಮ್ಯ ಚೇತನ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಡ ಹೆಣ್ಣು ಮಕ್ಕಳ ಒಳಿತಾಗಿಯೂ ಶ್ರಮಿಸುತ್ತಿದೆ. ಹಲವು ಸಮಾಜಮುಖಿ ಕೆಲಸಕಾರ್ಯಗಳ ಜೊತೆಗೆ ಸ್ವಚ್ಛ ಪರಿಸರಕ್ಕಾಗಿ ತನ್ನಿಂದಾದ ಕೊಡುಗೆ ನೀಡುತ್ತಿದೆ.
ಹೆಚ್ಚಿನ ಸಭೆ ಸಮಾರಂಭಗಳಲ್ಲಿ ಊಟ ತಿಂಡಿಗಾಗಿ ಪ್ಲಾಸ್ಟಿಕ್ ಕಪ್ ತಟ್ಟೆಗಳನ್ನು ಬಳಸಲಾಗುತ್ತಿದೆ . ಇದರಿಂದ ಕಸದ ಪ್ರಮಾಣ ಜಾಸ್ತಿಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆಯು ಉಚಿತವಾಗಿ ಸ್ಟೀಲ್ ತಟ್ಟೆಗಳನ್ನು ನೀಡುತ್ತಿದೆ. ಮಿತವಾಗಿ ಬಳಸಿ-ಮರು ಬಳಕೆ ಮಾಡಿ ಎನ್ನುವುದು ಅದಮ್ಯ ಚೇತನ ಸಂಸ್ಥೆಯ ಮನೋಭಾವ. ಸಭೆ ಸಮಾರಂಭಗಳಿಗೆ ಉಚಿತವಾಗಿ ಸ್ಟೀಲ್ ತಟ್ಟೆಗಳನ್ನು ಪಡೆಯಲು ಅಥವಾ ಪ್ಲೇಟ್ ಬ್ಯಾಂಕ್ ಪ್ರಾರಂಭಿಸಲು ಅದಮ್ಯ ಚೇತನ ಅವರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಈ ಬಾರಿಯ ಪರ್ಯಾಯ ಮಹೋತ್ಸವ ವೇಳೆಯೂ ಅನ್ನದಾನದ ವೇಳೆ ಕಸದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ 12 ಸಾವಿರ ತಟ್ಟೆಗಳನ್ನು ಕಳುಹಿಸಿಕೊಡಲಾಗುತ್ತಿದೆ.