ಸಮಾಜ ಒಪ್ಪಿದರೆ ಸೇನೆಯಲ್ಲಿ ಮಹಿಳಾ ಕಾಲಾಳುಗಳ ನೇಮಕ: ಸೇನಾ ಜನರಲ್
ಸಮಾಜದ ಒಪ್ಪಿಗೆ ಇದ್ದರೆ ಭಾರತೀಯ ಸೇನೆಯು ತನ್ನ ಕಾಲಾಳು ಪಡೆಯಲ್ಲಿ ಮಹಿಳೆಯರನ್ನು ಭರ್ತಿ ಮಾಡಲು ಸಿದ್ಧವಾಗಿದೆ ಎಂದು ಸೇನಾ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಮಹಿಳೆಯರನ್ನು “ದುರ್ಬಲರು” ಎಂಬಂತೆ ನೋಡಬಾರದು ಎಂದು ಸಂದರ್ಶನವೊಂದರಲ್ಲಿ ಒತ್ತಿ ಹೇಳಿದ ಜನರಲ್, ಸೇನೆಯ ಗಮನ “ಲಿಂಗ ನಿರಪೇಕ್ಷತೆ” ಮೇಲೆ ಇದೆ ಎಂದರು. “ಸಮಾನ ಮಾನದಂಡಗಳು ಹಾಗೂ ಸಾಮರ್ಥ್ಯಗಳಿದ್ದರೆ. ಭಾರತದಂತಹ ರಾಷ್ಟ್ರದಲ್ಲಿ ಸಮಾಜವೂ ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗಿದ್ದರೆ, ಶತ್ರುಗಳೊಂದಿಗಿನ ಕಾಳಗದಲ್ಲಿ ಮಹಿಳೆಯರನ್ನು ನಾಳೆಯಿಂದಲೇ ಬಳಸಿಕೊಳ್ಳಲು ಸೇನೆಯು ಸಿದ್ಧವಿದೆ” ಎಂದು ಅವರು ಹೇಳಿದರು.
ಈಗಿರುವ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆಯ ದತ್ತಾಂಶವು ಮಹಿಳೆಯರಿಗೆ ಸೇನೆಯಲ್ಲಿ ಹೆಚ್ಚಿನ ಪಾತ್ರಗಳನ್ನು ತೆರೆಯುವುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಪಡೆಗಳಲ್ಲಿ ಸುಮಾರು 60 ಮಹಿಳಾ ಸೇನಾ ಕ್ಯಾಡೆಟ್‌ಗಳು ಇದ್ದರು ಮತ್ತು ಪ್ರತಿ ವರ್ಷ 20 ಕ್ಯಾಡೆಟ್‌ಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ. ಅಧಿಕಾರಿಗಳ ತರಬೇತಿ ಅಕಾಡೆಮಿ (ಒಟಿಎ)—ಚೆನ್ನೈ ಮತ್ತು ಗಯಾ ಗಳಲ್ಲಿ ಪ್ರತಿ ವರ್ಷ 120 ಮಹಿಳಾ ಕೆಡೆಟ್ ಗಳನ್ನು ತಯಾರು ಮಾಡುವ ಗುರಿಯಿದೆ ಎಂದು ಹೇಳಿದರು.
ಇತರ ಶ್ರೇಣಿಗಳಲ್ಲಿ (ಒಆರ್‌ಗಳು) ಮಹಿಳೆಯರನ್ನು ಭರ್ತಿ ಮಾಡುವುದು ಸೇನಾ ಕಾಯ್ದೆಯ 12ನೇ ವಿಭಾಗದ ತಿದ್ದುಪಡಿಯನ್ನು ಅವಲಂಬಿಸಿದೆ ಎಂದ ಅವರು 2032ರ ವೇಳೆಗೆ ಒಆರ್‌ಗಳಲ್ಲಿ ಮಹಿಳೆಯರ ಭರ್ತಿಯನ್ನು 12 ಪಟ್ಟು ಹೆಚ್ಚಿಸುವ ಗುರಿಯಿದೆ. “ಪ್ರಸ್ತುತ ಮಹಿಳಾ ಅಧಿಕಾರಿಗಳ ಒಟ್ಟು ಸಂಖ್ಯೆ 8,000 ಇದೆ,” ಎಂದು ಅವರು ಹೇಳಿದರು. ಟೆರಿಟೋರಿಯಲ್ ಆರ್ಮಿ ಮಹಿಳೆಯರಿಗೆ ತೆರೆಯಲ್ಪಟ್ಟಿದ್ದು, 110 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.