ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
Monday, January 05, 2026
ಉಡುಪಿಯ ಬ್ರಹ್ಮಾವರ ತಾಲೂಕಿನ ಸೈಬ್ರಕಟ್ಟೆ ಸಮೀಪದ ಕಳ್ಳಾಡಿಯಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವಂಶಿತ್ (17) ಎಂದು ಗುರುತಿಸಲಾಗಿದೆ.
ವಂಶಿತ್‌ನ ತಂದೆ ಮಂದಾರ್ತಿ ಮೆಸ್ಕಾಂನಲ್ಲಿ ಉದ್ಯೋಗಿಯಾಗಿದ್ದು, ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ತಂದೆ ಮಂಜುನಾಥ್ ಶೆಟ್ಟಿಗಾರ್ ಅವರು ಕುಟುಂಬ ಕಾರ್ಯಕ್ರಮ ನಿಮಿತ್ತ ಕಾರ್ಕಳಕ್ಕೆ ತೆರಳಿದ್ದು, ತಾಯಿ ಪಾರ್ಲರ್‌ಗೆ ಹೋಗಿದ್ದರು. ಇದೇ ವೇಳೆ ವಂಶಿತ್ ಮನೆಯಲ್ಲಿದ್ದ ಸ್ಕೂಟರ್ ಚಲಾಯಿಸಿಕೊಂಡು ಹೊರಗಡೆ ಹೋಗಿ ಬರುವಾಗ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ಕಿಕ್ಕರ್ ತುಂಡಾಗಿದೆ. ಭಾನುವಾರವಾಗಿದ್ದರಿಂದ ಗ್ಯಾರೇಜ್ ತೆರೆಯದ ಕಾರಣ ಸ್ಕೂಟರ್‌ನ್ನು ಮನೆಗೆ ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ.
ಸ್ಕೂಟರ್‌ಗೆ ಹಾನಿಯಾಗಿದ್ದರಿಂದ ಮನೆಯವರು ಗದರಿಸಬಹುದು ಎಂಬ ಭಯದಿಂದ ವಂಶಿತ್ ಮಧ್ಯಾಹ್ನ 1 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.