ಟಿಪ್ಪರ್-ಸರ್ಕಾರಿ ಬಸ್ ಅಪಘಾತ; ಮೂವರು ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ
Monday, January 05, 2026
ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು-ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ತಿರುವಿನಲ್ಲಿ ಸಂಭವಿಸಿದೆ.
ಕುಂದಾಪುರದಿಂದ ಆಜ್ರಿ-ಸಿದ್ದಾಪುರ ಕಡೆಗೆ ಸಾಗುತ್ತಿದ್ದ ಸರ್ಕಾರಿ ಬಸ್ ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಸಾಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಬಸ್ ನ ಬಲ ಬದಿಗೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ಬದಿಯ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ.
ಸಂಜೆ ಸಮಯವಾದ್ದರಿಂದ ಬಸ್ ನಲ್ಲಿ ಬಹುತೇಕ ಕಾಲೇಜು ವಿದ್ಯಾರ್ಥಿಗಳಿದ್ದು, ಕಿಟಿಕಿ ಬದಿಯಲ್ಲಿ ಕೂತವರೆಲ್ಲರಿಗೂ ಗಂಭೀರ ಗಾಯಗಳಾಗಿದೆ. ಸ್ಥಳೀಯ ಯುವಕ ಪ್ರಶಾಂತ್ ಪೂಜಾರಿ ಕರ್ಕಿ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಂಭೀರ ಗಾಯಗೊಂಡ ಗಾಯಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.