ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯೋಪಾಧ್ಯಾಯ ನಿಧನ
Tuesday, January 20, 2026
ತೆಂಗಿನ ಮರಕ್ಕೆ ಹಬ್ಬಿದ್ದ ಕಾಳುಮೆಣಸು ಬಳ್ಳಿಯಿಂದ ಕಾಳು ಮೆಣಸು ಕೀಳುವ ವೇಳೆ ತೆಂಗಿನ ಮರದಿಂದ ಬಿದ್ದು ನಿವೃತ್ತ ಮುಖ್ಯೋಪಾಧ್ಯಾಯರು ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆಯಲ್ಲಿ ನಡೆದಿದೆ.
ಮೃತರನ್ನು ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆ ನಿವಾಸಿ ನಾರಾಯಣ ನಾಯಕ್ ಪೈಂಟಿಮುಗೇರು ಎಂದು ಗುರುತಿಸಲಾಗಿದೆ. ಮನೆಯ ಮುಂದೆ ತೆಂಗಿನ ಮರಕ್ಕೆ ಹಬ್ಬಿದ್ದ ಕಾಳು ಮೆಣಸು ಬಳ್ಳಿಯಿಂದ ಕಾಳು ಮೆಣಸು ಕೀಳಲು ಅಲ್ಯೂಮಿನಿಯಂ ಏಣಿ ಹತ್ತುತ್ತಿದ್ದಾಗ ಜಾರಿ ಏಣಿಯೊಂದಿಗೆ ಬಿದ್ದಿದ್ದಾರೆ.
ಕೆಳಗೆ ಬಿದ್ದಾಗ ನಾರಾಯಣ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ನಾರಾಯಣ ನಾಯಕ್ ಬಡಗನ್ನೂರಿನ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಪಡುಮಲೆ ಶ್ರೀ ಕೋವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.