ಸಿದ್ದಾಪುರ ಏತ ನೀರಾವರಿ ಯೋಜನೆಗೆ ಬೆಂಬಲ: ಬೃಹತ್ ಜನಾಗ್ರಹ ಸಭೆ
ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಉಡುಪಿ ಜಿಲ್ಲಾ ರೈತ ಸಂಘ ಹಾಗೂ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದು ಬೃಹತ್ ಜನಾಗ್ರಹ ಸಭೆ ಹಾಗೂ ಪ್ರಯತಿಭಟನೆ ನಡೆಯಿತು.
ಸಿದ್ದಾಪುರ ಸರ್ಕಲ್ ಬಳಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿ ಯೋಜನೆಗೆ ತಕ್ಷಣ ಅನುಮೋದನೆ ನೀಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಕೈಯಲ್ಲಿ ಹಸಿರು ಶಾಲುಗಳನ್ನು ಬೀಸಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸಿದರು. ಅಲ್ಲದೇ “ನೀರಾವರಿ ನಮ್ಮ ಹಕ್ಕು”, “ರೈತರ ಬದುಕಿಗಾಗಿ ಯೋಜನೆ ಜಾರಿ ಅಗತ್ಯ” ಎಂಬ ಘೋಷಣೆಗಳನ್ನು ಕೂಗಿದರು. ಸಿದ್ದಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಈ ಏತ ನೀರಾವರಿ ಯೋಜನೆ ಅತ್ಯಂತ ಅಗತ್ಯವಾಗಿದ್ದು, ಕೃಷಿ ಅವಲಂಬಿತ ಜನರ ಬದುಕಿಗೆ ಇದು ಜೀವನಾಡಿಯಾಗಿದೆ. ಹಾಗಾಗಿ ಈ ಯೋಜನೆಗೆ ತಡೆಯೊಡ್ಡಬಾರದೆಂಬ ಆಗ್ರಹ ವ್ಯಕ್ತವಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಪ್ರತಾಪಚಂದ್ರ ಶೆಟ್ಟಿ ಅವರು ಮಾತನಾಡಿ, ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾದರೆ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಆದರೆ ಅನಗತ್ಯ ವಿಳಂಬದಿAದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಪೂರೈಸಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ, ಸಿದ್ದಾಪುರ ಏತ ನೀರಾವರಿ ಯೋಜನೆ ರಾಜಕೀಯದ ಬಲಿ ಆಗಬಾರದು. ರೈತರ ಹಿತದೃಷ್ಟಿಯಿಂದ ಯೋಜನೆಗೆ ಅಗತ್ಯವಾದ ಎಲ್ಲ ಅನುಮೋದನೆಗಳನ್ನು ಸರ್ಕಾರ ನೀಡಬೇಕು ಎಂದು ಹೇಳಿದರು.
ಜನಾಗ್ರಹ ಸಭೆಯ ಬಳಿಕ ಪ್ರತಿಭಟನಾಕಾರರು ಪಾದಯಾತ್ರೆ ಮೂಲಕ ವಾರಾಹಿ ಯೋಜನಾ ಕಚೇರಿಗೆ ತೆರಳಲು ನಿರ್ಧರಿಸಿದ್ದು, ಅಲ್ಲಿಯೂ ತಮ್ಮ ಬೇಡಿಕೆಗಳನ್ನು ದಾಖಲಿಸುವುದಾಗಿ ಘೋಷಿಸಿದರು. ರೈತರ ಧ್ವನಿ ಸರ್ಕಾರದ ಕಿವಿಗೆ ತಲುಪುವವರೆಗೆ ಹೋರಾಟ ಮುಂದುವರಿಸುವುದಾಗಿ ಸಂಘಟಕರು ಎಚ್ಚರಿಸಿದರು.
ಈ ನಡುವೆ, ಯೋಜನೆಗೆ ತಡೆ ತಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ, ಗೋಪಾಲ ಪೂಜಾರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸಿರುವ ಹೊಣೆಗಾರಿಕೆ ಅವರ ಮೇಲಿದೆ ಎಂದು ಆರೋಪಿಸಿದ ರೈತರು, ಈ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

.jpeg)
.jpeg)