ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ; ಆರೋಪಿಯ ಬಂಧನಕ್ಕೆ ಆಗ್ರಹ
ರೋಸ್ ಕಾರ್ಯಕ್ರಮವೊಂದಕ್ಕೆ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರಿನಲ್ಲಿ ನಡೆದಿದೆ.
ಜನವರಿ 6ರಂದು ರಾತ್ರಿ ಪಜೀರು ಚರ್ಚ್ ಹಾಲ್ ನಲ್ಲಿ ಈ ಘಟನೆ ನಡೆದಿದ್ದು, ಪಜೀರು ಗ್ರಾಪಂ ಮಾಜಿ ಸದಸ್ಯೆ ಸುನಿತಾ ಲೋಬೊ ಹಲ್ಲೆಗೊಳಗಾದವು. ಪಜೀರು ಗ್ರಾಮದ ನಿವಾಸಿ ವಲೇರಿಯನ್ ಡಿಸೋಜ ಹಲ್ಲೆಗೈದ ಆರೋಪಿ. ಇವರಿಬ್ಬರ ಕುಟುಂಬದ ಮಧ್ಯೆ ಹಳೆ ವೈಷಮ್ಯ ಇತ್ತು ಎನ್ನಲಾಗಿದೆ. ಜ.6ರಂದು ಸಂಬAಧಿಕರ ರೋಸ್ ಕಾರ್ಯಕ್ರಮದಲ್ಲಿ ಸುನಿತಾ ಅವರ ಕುಟುಂಬ ಪಾಲ್ಗೊಂಡಿದ್ದು ಈ ವೇಳೆ ಮೈಗೆ ತಾಗಿದ ನೆಪದಲ್ಲಿ ಮಾತಿಗೆ ಮಾತು ಬೆಳೆದು ವಲೇರಿಯನ್ ಡಿಸೋಜ ಬಿಯರ್ ಬಾಟಲಿಯನ್ನು ತಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ವಲೇರಿಯನ್ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಆರೋಪಿಯು ಮಹಿಳೆ ಜೊತೆಗಿದ್ದ ಪತಿ ಮತ್ತು ಮಗನ ಮೇಲೂ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ವಲೇರಿಯನ್ ಕೂಡಾ ಪ್ರತಿ ದೂರು ನೀಡಿದ್ದು ಕೋಣಾಜೆ ಠಾಣೆಯಲ್ಲಿ ದಾಖಲಾಗಿದೆ. ಹಣೆಗೆ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆನಂತರ ಒಂದು ವಾರ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೇ ವೇಳೆ, ವಲೇರಿಯನ್ ಡಿಸೋಜ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ ಹತ್ತು ದಿನಗಳಿಂದಲೂ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗುತ್ತ ಪೊಲೀಸರ ಬಂಧನದಿOದ ತಪ್ಪಿಸಿಕೊಳ್ಳುತ್ತಿದ್ದಾನೆ. ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಕೊಲೆಯತ್ನ ಪ್ರಕರಣ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸುನಿತಾ ಲೋಬೊ ಆರೋಪಿಸಿದ್ದಾರೆ.
ಸುನಿತಾ ಲೋಬೊ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು, 2015ರಲ್ಲಿ ಪಜೀರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದರು. ಈ ವೇಳೆ ವಲೇರಿಯನ್ ಡಿಸೋಜ ತನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಕಾಂಗ್ರೆಸಿನಿOದ ಟಿಕೆಟ್ ಪಡೆಯಲು ಪ್ರಯತ್ನ ಪಟ್ಟಿದ್ದ. ಆನಂತರ, ತನ್ನ ಪತ್ನಿಯನ್ನು ಪಕ್ಷೇತರ ನಿಲ್ಲಿಸಿ ಸುನಿತಾರನ್ನು ಸೋಲಿಸಲು ಪ್ರಯತ್ನಿಸಿದ್ದ. ಆದರೆ ಸುನಿತಾ ಲೋಬೊ ಅವರೇ ಚುನಾವಣೆಯಲ್ಲಿ ಗೆದ್ದಿದ್ದರು. ಅದೇ ಸಿಟ್ಟಿನಲ್ಲಿ ಪ್ರತಿ ಬಾರಿಯೂ ನಮ್ಮ ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಜಗಳಕ್ಕೆ ಬಂದು ಹಗೆ ತೀರಿಸಲು ನೋಡುತ್ತಿದ್ದಾನೆಂದು ಸುನಿತಾ ಆರೋಪಿಸಿದ್ದಾರೆ. ಹಲ್ಲೆ ಘಟನೆಯನ್ನು ಉಳ್ಳಾಲ ಮಹಿಳಾ ಕಾಂಗ್ರೆಸ್ ಖಂಡಿಸಿದ್ದು, ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ವಲೇರಿಯನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಘಟನೆ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದ್ದು, ಪೊಲೀಸರು ಆರೋಪಿ ಬಗ್ಗೆ ಮೃದು ಧೋರಣೆ ತಾಳಿರುವುದನ್ನು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆಕ್ಷೇಪಿಸಿದ್ದಾರೆ. ಬಿಯರ್ ಬಾಟಲಿಯಲ್ಲಿ ಮಹಿಳೆಗೆ ಹೊಡೆದಿರುವ ಸಿಸಿಟಿವಿ ದೃಶ್ಯ ಇದ್ದರೂ ಕೊಲೆಯತ್ನ ಪ್ರಕರಣ ದಾಖಲಿಸದ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ.