ಉಚ್ಚಾಟನೆ ರಾಜಕೀಯ ಕೊಲೆ: ದೀಪಕ್ ಶೆಟ್ಟಿ ಗಂಭೀರ ಆರೋಪ
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಿರುದ್ಧ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಮ್ಮ ಉಚ್ಚಾಟನೆ ರಾಜಕೀಯ ಪ್ರೇರಿತವಾಗಿದ್ದು, ಇದು ರಾಜಕೀಯ ಕೊಲೆಗೆ ಸಮಾನ ಎಂದು ಹೇಳಿದ್ದಾರೆ.
ಅವರು ಬೈಂದೂರು ರೈತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 13 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಹಗಲಿರುಳು ದುಡಿದ ತಮ್ಮ ಪರಿಶ್ರಮವನ್ನು ಮರೆತು, ತಮ್ಮ ಬೆಳವಣಿಗೆಯನ್ನು ಸಹಿಸಲಾಗದೆ ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಉಚ್ಚಾಟನೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದರು.
ಇಂದಿನ ಬೈಂದೂರು ಶಾಸಕರು ಭ್ರಷ್ಟಾಚಾರದಲ್ಲಿ “ನಂಬರ್ ಒನ್” ಆಗಿದ್ದು, ಅವರ ವಿರುದ್ಧ ಆಕ್ರಮಗಳ ಪಟ್ಟಿ ಸಾಲುಸಾಲು ಇದೆ ಎಂದು ಕಿಡಿಕಾರಿದರು. ತೆರೆಮರೆಯಲ್ಲಿ ನಡೆದ ಪಕ್ಷ ವಿರೋಧಿ ಚಟುವಟಿಕೆಗಳಿಗೂ ಲೆಕ್ಕವಿಲ್ಲ ಎಂದರು.
ಕಳೆದ ನಾಲ್ಕು ತಿಂಗಳಿಂದ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಸಿಗದಂತೆ ತಡೆಯುವಲ್ಲಿ ಶಾಸಕರೇ ಕಾರಣರಾಗಿದ್ದಾರೆ ಎಂದು ಶೆಟ್ಟಿ ಆರೋಪಿಸಿದರು. ತಮ್ಮ ನೇತೃತ್ವಕ್ಕೆ ಜಯ ಸಿಗಬಹುದು ಎಂಬ ಕಾರಣಕ್ಕೆ ರಾಜ್ಯಮಟ್ಟದಲ್ಲಿ ರೈತರಿಗೆ ನ್ಯಾಯ ಸಿಗದಂತೆ ಮಾಡಿದ್ದಾರೆ ಎಂದರು. ಮರಳುಗಾರಿಕೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ತಿಂಗಳಿಗೆ 35 ಲಕ್ಷ ರೂಪಾಯಿ ಹಣ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.
ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದೆ ಉತ್ಸವಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಬೈಂದೂರು ಉತ್ಸವದಿಂದ ಜನರಿಗೆ ಏನು ಲಾಭವಾಗಿದೆ? ಇದು ರೈತರ ಹೆಣದ ಮೇಲೆ ನಡೆಯುವ ಉತ್ಸವ ಎಂದು ಅವರು ಕಿಡಿಕಾರಿದರು. ಬಿಜೆಪಿ ಪಕ್ಷದ ನಿಯಮದ ಪ್ರಕಾರ ತಮ್ಮ ಉಚ್ಚಾಟನೆ ನಡೆದಿಲ್ಲ. ಈ ಆದೇಶಕ್ಕೆ ಯಾವುದೇ ಮೌಲ್ಯವಿಲ್ಲ. ನಾನು ಕಾರ್ಯಕರ್ತರ ಹೃದಯದಲ್ಲಿದ್ದೇನೆ. ಉಚ್ಚಾಟನೆ ಮಾಡಬೇಕಾದರೆ ಮೊದಲು ಬೈಂದೂರು ಶಾಸಕರನ್ನೇ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಸುರೇಂದ್ರ ಖಾರ್ವಿ, ಲಿಮೋನ್ ಅತ್ಯಾಡಿ, ಭಾಸ್ಕರ ಮರಾಠಿ ಗಂಗನಾಡು ಹಾಗೂ ಮಾಜಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ ಉಪಸ್ಥಿತರಿದ್ದರು.