ಭಗವಧ್ವಜ ವಿವಾದ: ಡಿಸಿ ಸ್ವರೂಪ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ
Wednesday, January 21, 2026
ಶೀರೂರು ಪರ್ಯಾಯದ ಪುರ ಮೆರವಣಿಗೆ ವೇಳೆ ಭಗವಧ್ವಜ ಹಾರಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಸೆಲ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದೆ.
ಮುಂಜಾನೆ 3:00ಗಂಟೆ ಸುಮಾರಿಗೆ ಮೆರವಣಿಗೆಯ ವೇಳೆ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರ ಕೈಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಭಗವಧ್ವಜ ಹಸ್ತಾಂತರಿಸಿದ್ದು, ಅವರು ಈ ಧ್ವಜವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತಿ ಪ್ರದರ್ಶಿಸುತ್ತಾ ಮೆರವಣಿಗೆಗೆ ಚಾಲನೆ ನೀಡಿದ್ದರು ಎಂದು ಕಾಂಗ್ರೆಸ್ ಕಾನೂನು ಸೆಲ್‌ನ ಅಧ್ಯಕ್ಷ ಹರೀಶ್ ಶೆಟ್ಟಿ ಜ.19ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದ ಪ್ರತಿಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೂ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಯವರ ಈ ನಡೆ ಸರಕಾರಿ ಸೇವಾ ನಿಯಮಗಳು ಹಾಗೂ ಸಂವಿಧಾನದ ಧರ್ಮ ನಿರಪೇಕ್ಷತೆಯ ತತ್ವಗಳಿಗೆ ವಿರುದ್ಧವಾಗಿದ್ದು, ಈ ರೀತಿಯ ನಡೆ ಅತ್ಯಂತ ಆಕ್ಷೇಪಾರ್ಹವಾಗಿದೆ ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಹರೀಶ್ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.