ಏ.1ರಿಂದ ಟೋಲ್ ಗೇಟ್ಗಳಲ್ಲಿ ನಗದು ಪಾವತಿಯಿಲ್ಲ; FASTag, ಯುಪಿಐ ಮೂಲಕವೇ ಪಾವತಿ
ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಏ.1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನವಾದ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಪ್ರಸ್ತುತ ನಿಯಮಗಳ ಪ್ರಕಾರ, FASTag ಇಲ್ಲದೆ ಟೋಲ್ ಪ್ರವೇಶಿಸುವವರು ನಗದು ನೀಡಿದರೆ ದುಪ್ಪಟ್ಟು ಹಣ ನೀಡಬೇಕು. ಆದರೆ ಹೊಸ ನಿಯಮದಂತೆ ನಗದು ಪಾವತಿಗೆ ಅವಕಾಶವಿರುವುದಿಲ್ಲ; ಅಂತಹವರು ಯುಪಿಐ ಮೂಲಕ 1.25 ಪಟ್ಟು ಹೆಚ್ಚಿನ ಶುಲ್ಕ ಪಾವತಿಸಬೇಕಾಗಬಹುದು.
ಏ.1ರಿಂದ ನಗದು ಪಾವತಿಯನ್ನು ಸ್ಥಗಿತಗೊಳಿಸಿದ ಬಳಿಕ, ವ್ಯಾಪಕವಾಗಿ ನಗದು ರೂಪದಲ್ಲಿ ಪಾವತಿಯಾಗುತ್ತಿರುವ ದಂಡ ಮೊತ್ತದ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಓವರ್‌ಲೋಡ್ ಮತ್ತಿತರ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ಹೆಚ್ಚಾಗಿ ನಗದು ರೂಪದಲ್ಲೇ ಪಾವತಿಸಲಾಗುತ್ತಿದೆ. ಈ ದಂಡ ಪಾವತಿಯನ್ನು ಕೂಡಾ ಹೆಚ್ಚು ತಾರ್ಕಿಕಗೊಳಿಸುವ ಮತ್ತು ನಗದು ರಹಿತ ವ್ಯವಹಾರವನ್ನು ಸುಗಮಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ವಿವರಿಸಿದ್ದಾರೆ.
ಶೇ. 98 ಕ್ಕಿಂತ ಹೆಚ್ಚು ವಾಹನಗಳು ಈಗಾಗಲೇ FASTag ಬಳಸುತ್ತಿವೆ. ಇದು RFID ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಹಣ ಕಡಿತಗೊಳಿಸುತ್ತದೆ. ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡುವುದು, ಪ್ರಯಾಣದ ಸಮಯ ಉಳಿಸುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.