-->
 ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಸರಣಿ ಅಗ್ನಿ ಅವಘಡ ವ್ಯವಸ್ಥಿತ ಹಗರಣದ ಅನುಮಾನ..!

ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಸರಣಿ ಅಗ್ನಿ ಅವಘಡ ವ್ಯವಸ್ಥಿತ ಹಗರಣದ ಅನುಮಾನ..!


ಉಡುಪಿ ಜಿಲ್ಲೆಯ ಘನ ತ್ಯಾಜ್ಯ ನಿರ್ವಹಣೆಗಾಗಿ ಹಲವು ಕಡೆಗಳಲ್ಲಿ ಎಂಆರ್‌ಎಫ್ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ತ್ಯಾಜ್ಯ ನಿರ್ವಹಣೆಗಾಗಿ ನಿರ್ಮಿಸಲಾಗಿರುವ ಈ ಘಟಕಗಳಲ್ಲಿ ಸರಣಿ ಅಗ್ನಿ ಅವಘಡಗಳು ಸಂಭವಿಸುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಘಟನೆಗಳ ಹಿಂದೆ ಸಂಘಟಿತ ಹಗರಣವೊಂದು ಅಡಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. 


ಇತ್ತೀಚೆಗೆ ಹೆಬ್ರಿ ತಾಲೂಕಿನ ಎಂಆರ್‌ಎಫ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ದಿನಗಳ ಹಿಂದೆಯಷ್ಟೇ ಬೆಳ್ವೆ ಭಾಗದಲ್ಲಿಯೂ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿತ್ತು. ಕಡಿಮೆ ಅವಧಿಯೊಳಗೆ ಒಂದರ ಹಿಂದೆ ಒಂದಾಗಿ ನಡೆಯುತ್ತಿರುವ ಈ ಬೆಂಕಿ ಘಟನೆಗಳು ಸಹಜವಲ್ಲವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಘನ ದ್ರವ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆಯ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ದುಬಾರಿ ಯಂತ್ರೋಪಕರಣಗಳು, ತಾಂತ್ರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಬೆಂಕಿಗೆ ಆಹುತಿಯಾಗುತ್ತಿರುವುದರಿಂದ ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.


ಈ ಘಟಕಗಳಲ್ಲಿ ಅಗತ್ಯ ಭದ್ರತಾ ಕ್ರಮಗಳು ಪಾಲಿಸಲಾಗಿದೆಯೇ, ನಿರ್ವಹಣೆಯಲ್ಲಿ ನಿರ್ಲಕ್ಷ್ಯವಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯೇ ಎಂಬ ಬಗ್ಗೆ ತನಿಖೆ ಅಗತ್ಯವಾಗಿದೆ ಎಂದು ಹೆಬ್ರಿ ಭಾಗದ ಸ್ಥಳೀಯರು ಒತ್ತಾಯಿಸಿದ್ದಾರೆ. ಒಂದರ ಹಿಂದೆ ಒಂದಾಗಿ ನಡೆಯುತ್ತಿರುವ ಅಗ್ನಿ ಅವಘಡಗಳು ಸಹಜವಾಗಿರುವಂತೆ ಕಾಣುತ್ತಿಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗುತ್ತಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಘಟನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಬOಧಪಟ್ಟ ಎಲ್ಲರ ಪಾತ್ರವನ್ನು ಪರಿಶೀಲಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. 




ಘನ ದ್ರವ ತ್ಯಾಜ್ಯ ನಿರ್ವಹಣೆಯಂತಹ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳು ಹಗರಣಗಳಿಗೆ ಕಾರಣವಾಗಬಾರದು. ಜನರ ತೆರಿಗೆ ಹಣದಿಂದ ನಿರ್ಮಿತವಾಗಿರುವ ಈ ಘಟಕಗಳ ಸುರಕ್ಷತೆ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಅಗತ್ಯವಿದೆ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.





Ads on article

Advertise in articles 1

advertising articles 2

Advertise under the article