ಸಮಾಜ ಸೇವೆಗೆ ವಿದಾಯ ಘೋಷಿಸಿದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ
ಮುಂಬಯಿ ಉದ್ಯಮಿ ಹಾಗೂ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜ ಸೇವಾ ಚಟುವಟಿಕೆಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಾಗತಿಕ ಬಂಟರ ಸಂಘ ದ ಲೆಕ್ಕಪತ್ರಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ತಮ್ಮ ವಿರುದ್ಧ ತೇಜೋವಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಸಮಾಜ ಸೇವೆ ತಾವು ಹೃದಯಪೂರ್ವಕವಾಗಿ ಕೈಗೊಂಡ ಕಾರ್ಯವಾಗಿತ್ತು ಎಂದು ಹೇಳಿದ ಡಾ. ಕನ್ಯಾನ ಸದಾಶಿವ ಶೆಟ್ಟಿ, ಬಡತನದಿಂದ ಹೊರಬಂದು ಉದ್ಯೋಗ ಹಾಗೂ ಉದ್ಯಮ ಕಟ್ಟಿಕೊಂಡ ತಮ್ಮ ಜೀವನದ ಪಯಣವನ್ನು ಸ್ಮರಿಸಿದರು. “ಆರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೆ. ಇದು ನನಗೆ ಆತ್ಮತೃಪ್ತಿ ನೀಡುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ನನ್ನ ನೆಮ್ಮದಿಯನ್ನು ಕಸಿದುಕೊಂಡಿವೆ” ಎಂದು ಅವರು ನೋವು ವ್ಯಕ್ತಪಡಿಸಿದರು.
ದಾನ ನೀಡಿದವರಿಗೆ ಲೆಕ್ಕ ಕೇಳುವ ಹಕ್ಕು ಇದೆಯೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಫೆಬ್ರವರಿ 16ರಂದು ಮುಂಬಯಿನಲ್ಲಿ ಕರೆಯಲಾದ ಸಭೆ ಎಲ್ಲಾ ದಾನಿಗಳ ಒಪ್ಪಿಗೆಯೊಂದಿಗೆ ನಡೆದ ಸಭೆಯಾಗಿದೆ ಎಂದರು. ಆ ಸಭೆಗೆ ಸಂಬOಧಿಸಿ ಜಾಹೀರಾತು ನೀಡಿ, ಲಾಯರ್ ನೋಟೀಸ್ ಕಳುಹಿಸಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಹೇಳಿಕೆಗಳು ಪ್ರಸಾರವಾಗುತ್ತಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂಬOಧ ಈಗಾಗಲೇ ಕೇರಳದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಫೆಬ್ರವರಿ 14ರಿಂದ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದ ದೇಣಿಗೆ ವಾಗ್ದಾನವನ್ನು ಸ್ಥಗಿತಗೊಳಿಸಿರುವುದಾಗಿ ಅವರು ಘೋಷಿಸಿದರು. ಆದರೆ ವೈಯಕ್ತಿಕವಾಗಿ ಆರೋಗ್ಯ ಹಾಗೂ ವೈದ್ಯಕೀಯ ನೆರವಿಗೆ ಸಂಬOಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದರು.