ಫೆ. 14: ನಂದಿಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧ
ಫೆಬ್ರವರಿ 14 ವಿಶ್ವ ಪ್ರೇಮಿಗಳ ದಿನಾಚರಣೆಯಂದು ನಂದಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಉಪ ಆಯುಕ್ತ ಜಿ ಪ್ರಭು ಈ ಬಗ್ಗೆ ಮಾಹಿತಿ ನೀಡಿದ್ದು ಜನಪ್ರಿಯ ಪ್ರವಾಸಿ ತಾಣದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ “ಹಿಂದೆ ಪ್ರೇಮಿಗಳ ದಿನದಂದು ವರದಿಯಾದ ಆತ್ಮಹತ್ಯೆ ಪ್ರಕರಣ ಪರಿಗಣಿಸಿ ನಾವು ಈ ನಿಷೇಧವನ್ನು ವಿಧಿಸಲು ನಿರ್ಧರಿಸಿದ್ದೇವೆ”. ಹೊಸ ವರ್ಷದ ದಿನವನ್ನು ಹೊರತುಪಡಿಸಿ, ನಂದಿ ಬೆಟ್ಟವು ವರ್ಷವಿಡೀ ತೆರೆದಿದ್ದರೂ, ಪ್ರೇಮಿಗಳ ದಿನದಂದು ಅವ್ಯವಸ್ಥೆಯನ್ನು ತಪ್ಪಿಸಲು ಪ್ರವೇಶ ನಿಷೇಧ ಜಾರಿಗೊಳಿಸಲಾಗಿದೆ.ಅಲ್ಲದೆ, ಪ್ರೇಮಿಗಳ ದಿನದ ಹೆಸರಿನಲ್ಲಿ ಕೆಲವರು ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯವಾಗಿ ವರ್ತಿಸುವುದು, ಕುಡಿದ ಅಮಲಿನಲ್ಲಿ ಅಪಾಯಕಾರಿ ಸ್ಥಳಗಳಿಗೆ ತೆರಳಿ ಅವಘಡಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 163ರ ಅನ್ವಯ ಈ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಈ ಬಗ್ಗೆ ಮಾತನಾಡಿದ್ದು ಜನದಟ್ಟಣೆಯ ಅಪಾಯದ ಹೊರತಾಗಿ, ವಾತಾವರಣವು ಹೆಚ್ಚಾಗಿ ಕಸ ಮತ್ತು ಗದ್ದಲದಿಂದ ಹಾಳಾಗುತ್ತದೆ. ಜನರು ಪ್ಲಾಸ್ಟಿಕ್ ಎಸೆಯುವ ಮೂಲಕ ಪರಿಸರವನ್ನು ಕಲುಷಿತಗೊಳಿಸುತ್ತಾರೆ. ಮದ್ಯದ ಪ್ರಭಾವದಿಂದ ತೊಂದರೆ ಉಂಟುಮಾಡುತ್ತಾರೆ. ಪ್ರೇಮಿಗಳ ದಿನ ಶನಿವಾರವಾಗುವುದರಿಂದ, ಸಾವಿರಾರು ಜನರು, ವಿಶೇಷವಾಗಿ ದಂಪತಿಗಳು ಇಲ್ಲಿಗೆ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ನಿಷೇಧ ಜಾರಿಗೊಳಿಸುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ. ಶನಿವಾರ ಬೆಳಿಗ್ಗೆ 6:00 ಗಂಟೆಯಿOದ ಸOಜೆ 6:00 ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿದೆ. ಪೊಲೀಸ್ ಇಲಾಖೆಯ ಮನವಿ ಮೇರೆಗೆ ಜಿಲ್ಲಾಡಳಿತ ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.