ಮುಚ್ಚುವ ದಯನೀಯ ಸ್ಥಿತಿಗೆ ತಲುಪಿದ ಗುಲ್ವಾಡಿ ಸರ್ಕಾರಿ ಶಾಲೆ
Thursday, February 12, 2026
ಉಡುಪಿ ಜಿಲ್ಲೆಯ ಬೈಂದೂರಿನ ಗುಲ್ವಾಡಿಯ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ 118 ವರ್ಷಗಳ ಇತಿಹಾಸವಿರುವ ಗುಲ್ವಾಡಿ ಸರ್ವೋದಯ ಅನುದಾನಿತ ಶಾಲೆ ಈಗ ಮುಚ್ಚುವ ದಯನೀಯ ಪರಿಸ್ಥಿತಿಗೆ ಬಂದೊದಗಿದೆ. ಸರ್ಕಾರದಿಂದ ಸರಿಯಾದ ಅನುದಾನವಿಲ್ಲದೇ ದಾನಿಗಳ ನೆರವಿನಿಂದಲೇ ಈವರೆಗೆ ನಡೆಸಿಕೊಂಡು ಬಂದ ಗುಲ್ವಾಡಿ ಶಾಲೆ ಮುಚ್ಚುವ ದುಃಸ್ಥಿತಿಗೆ ತಲುಪಿದೆ.
1908ರಲ್ಲಿ ಆರಂಭಗೊಂಡು 118 ವರ್ಷಗಳಿಂದ ಬಡ ಮಕ್ಕಳಿಗೆ ವಿದ್ಯಾರ್ಜನೆ ನೀಡಿದ ಸರ್ಕಾರಿ ಶಾಲೆ ಮೊದಲಿಗೆ ಸೌಕೂರು ಗುಲ್ವಾಡಿ ಶಾಲೆಯಾಗಿ ನಂತರ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಾಗಿ ಹೆಸರು ಪಡೆಯಿತು. ಈ ಶಾಲೆಯ ಸದ್ಯದ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅಕ್ಷರದಾಸೋಹ, ಪಠ್ಯಪುಸ್ತಕವಷ್ಟೇ ಸರ್ಕಾರದಿಂದ ಸಿಗುತ್ತಿದೆ.
ಈ ಶಾಲೆಯಲ್ಲಿ 45 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ನಿವೇದಿತ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಇವರನ್ನು ಪ್ರಭಾರ ಮುಖ್ಯಶಿಕ್ಷಕರಾಗಿ ಸರ್ಕಾರ ನೇಮಿಸಿದೆ. 5 ಜನ ಗೌರವ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರಕಾರದ ನೀತಿಯ ಪರಿಣಾಮವಾಗಿ ಶಾಲೆಯಲ್ಲಿ ಅಧ್ಯಾಪಕರಿಲ್ಲ. ಎರಡು ವರ್ಷದ ಹಿಂದೆ ಈ ಸಮಸ್ಯೆ ಆರಂಭವಾಯಿತು. ಊರಿನವರು ಐದು ಜನ ಗೌರವ ಅಧ್ಯಾಪಕರನ್ನು ನೇಮಿಸಿಕೊಂಡಿದ್ದಾರೆ. ಅವರಿಗೆಲ್ಲ ತಿಂಗಳಿಗೆ ಸುಮಾರು ರೂಪಾಯಿ 50000 ವೇತನ ನೀಡುತ್ತಿದ್ದಾರೆ. ಈಗ ಊರವರ ಕೈ ಖಾಲಿಯಾಗಿದೆ. ದಾನಿಗಳು ನೆರವು ನೀಡಿದರೆ ಶಾಲೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಇಲ್ಲದಿದ್ದರೆ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ.
ಗುಲ್ವಾಡಿ ಗ್ರಾಮಸ್ಥರ ಸಹಕಾರ ಹಾಗೂ ಶಾಲಾ ಕಾರ್ಯಕಾರಿ ಸಮಿತಿ ಹಾಗೂ ದಾನಿಗಳ ಕೊಡುಗೆಯಿಂದ ಶಾಲೆಯನ್ನು ಉನ್ನತ ಹಂತದವರೆಗೂ ನಡೆಸಿಕೊಂಡು ಬರಲಾಗಿದೆ. ಆದರೆ ಇದೀಗ ಮುಚ್ಚುವ ಪರಿಸ್ಥಿತಿಗೆ ಈ ಶಾಲೆ ಬಂದಿದೆ. ಉಡುಪಿ ಜಿಲ್ಲೆಯ ಸಂಘಸಂಸ್ಥೆಗಳು ಅಥವಾ ದಾನಿಗಳು ಸರ್ವೋದಯ ಅನುದಾನಿತ ಶಾಲೆಯನ್ನು ದತ್ತು ಸ್ವೀಕರಿಸುವ ಮೂಲಕ ಹಳೆಯ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಊರವರು ಮನವಿ ಮಾಡಿಕೊಂಡಿದ್ದಾರೆ.