ಹಿರಿಯ ಸಾಹಿತಿ, ಅಂಕಣಕಾರ ಕೋ. ಶಿವಾನಂದ ಕಾರಂತ ನಿಧನ
ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಾರಂತ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕುಂದಾಪುರ ಸಮೀಪದ ಕೋಣಿಯವರಾದ ಶಿವಾನಂದ ಕಾರಂತರು 1946ರ ಆಗಸ್ಟ್ 30ರಂದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು.
ಕುಂದಾಪುರದ 'ಕುಂದಪ್ರಭ' ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು. ಗಂಗೊಳ್ಳಿ ಎಸ್.ವಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕ ರಾಗಿಯೂ ಗುರುತಿಸಿಕೊಂಡಿದ್ದರು. ಇಲ್ಲಿಯವರೆಗೆ 10ಕ್ಕೂ ಹೆಚ್ಚುಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾ ದವು. 2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಾರಂತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಿರಣ್ ಕುಮಾರ್ ಕೊಡ್ಗಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂತಾಪ ವ್ಯಕ್ತಪಡಿಸಿದ್ದಾರೆ.