ಕರಾವಳಿಯ ರಸ್ತೆಯಲ್ಲಿ ಇನ್ಮುಂದೆ ಖಾಸಗಿ ಇ-ಬಸ್ ಓಡಾಟ..!
ಕರಾವಳಿಯಲ್ಲಿ ಮೊದಲ ಬಾರಿಗೆ ಖಾಸಗಿ ವಿದ್ಯುತ್ ಚಾಲಿತ ಬಸ್ ರಸ್ತೆಗಿಳಿಯಲಿದೆ. ಮಂಗಳೂರಿನಲ್ಲಿ ಫೆಬ್ರವರಿ 26ರಂದು ಮೊದಲ ಖಾಸಗಿ ಇ- ಬಸ್ ಅಧಿಕೃತ ಸಂಚಾರ ಆರಂಭಿಸಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರಾದ ದಿಲ್‌ರಾಜ್ ಆಳ್ವ ಅವರು ಈ ನವೀನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ವಿದ್ಯುತ್ ಚಾಲಿತ ಬಸ್ಸನ್ನು ಖರೀದಿಸಿದ್ದಾರೆ. ಈ ಪರಿಸರ ಸ್ನೇಹಿ ಬಸ್ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಿಂದ ಆರಂಭವಾಗುವ ರೂಟ್ ನಂಬರ್ 27 ರಲ್ಲಿ ಗಣೇಶ್ ಪ್ರಸಾದ್ ಹೆಸರಿನ ಇ- ಬಸ್ ಓಡಾಟ ನಡೆಸಲಿದೆ.
9 ಮೀ. ಉದ್ದದ ಬಸ್ ಇದಾಗಿದ್ದು, 32-41 ಸೀಟುಗಳನ್ನು ಹೊಂದಿದೆ. 200 ಕಿ.ಮೀ. ಓಡಾಟದ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 2 ಗಂಟೆಗಳಲ್ಲಿ ರಿಚಾರ್ಜ್ ಆಗಲಿದೆ. ಹವಾನಿಯಂತ್ರಣ ಬಸ್ ಇದಾಗಿದ್ದು, 5 ವರ್ಷದ ಬ್ಯಾಟರಿ ಗ್ಯಾರಂಟಿ ಹೊಂದಿದೆ. ಪುಣೆಯಲ್ಲಿ ಬಸ್‌ನ ಬಾಡಿ ವಿನ್ಯಾಸ ವ್ಯವಸ್ಥೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಪಿಎಂ ಇ- ಬಸ್ ಸೇವಾ ಅಡಿಯಲ್ಲಿ ಈಗಾಗಲೇ 100 ಎಲೆಕ್ಟಿçಕ್ ಬಸ್‌ಗಳನ್ನು ಮಂಗಳೂರಿಗೆ ತರಲು ಯೋಜನೆ ಸಿದ್ಧವಾಗುತ್ತಿದೆ. ಹೀಗಾಗಿ ಸರ್ಕಾರಿ ಇ ಬಸ್‌ಗಳು ರಸ್ತೆಗಿಳಿದರೆ ಖಾಸಗಿಯವರಿಗೆ ಹೊಡೆತ ಬೀಳುವುದು ಗ್ಯಾರಂಟಿ. ಹೀಗಾಗಿ ಸರ್ಕಾರಿ ಇ ಬಸ್ ಗಳು ರಸ್ತೆಗೆ ಇಳಿಯುವ ಮೊದಲೇ ಸರ್ಕಾರಕ್ಕೆ ಕಠಿಣ ಪೈಪೋಟಿ ನೀಡುವ ಉದ್ದೇಶದಿಂದ ಖಾಸಗಿ ಇ- ಬಸ್‌ಗಳನ್ನು ಮಂಗಳೂರಿಗೆ ತರಲಾಗಿದೆ.
ಖಾಸಗಿ ಬಸ್ ಮಾಲೀಕರು ಪ್ರಾಯೋಗಿಕ ಆಧಾರದ ಮೇಲೆ ವಿದ್ಯುತ್ ಬಸ್‌ಗಳನ್ನು ಓಡಿಸಲು ನಿರ್ಧರಿಸಿದ್ದು, ಪ್ರಯೋಗ ಯಶಸ್ವಿಯಾದರೆ ಹೆಚ್ಚಿನ ವಿದ್ಯುತ್ ಬಸ್‌ಗಳನ್ನು ಖರೀದಿಸಲು ಖಾಸಗಿ ಬಸ್ ಮಾಲಕರು ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ ಈ ಬಸ್‌ಗಳು ಪರಿಸರ ಸ್ನೇಹಿ ಪ್ರಯಾಣವನ್ನು ಒದಗಿಸಲಿದ್ದು, ಮಂಗಳೂರು ನಗರದ ಖಾಸಗಿ ಸಾರಿಗೆಯಲ್ಲಿ ಹೊಸ ಮೈಲಿಗಲ್ಲಾಗಲಿವೆ
